ಮೂರನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: 30,000 ಅಶ್ರುವಾಯು ಶೆಲ್‌ಗೆ ದಿಲ್ಲಿ ಪೊಲೀಸರ ಬೇಡಿಕೆ
ಹೊಸದಿಲ್ಲಿ: 'ದಿಲ್ಲಿ ಚಲೊ' ಪ್ರತಿಭಟನೆಯ ಮೂಲಕ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲು ಯತ್ನಿಸುತ್ತಿರುವ ರೈತರನ್ನು ತಡೆಯಲು ಪೊಲೀಸ್ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲು 30,000ಕ್ಕೂ ಹೆಚ್ಚು ಅಶ್ರುವಾಯು ಶೆಲ್‌ಗೆ ಬೇಡಿಕೆಯಿರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಂಜಾಬ್‌ನಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಬರುತ್ತಿರುವ ಪಂಜಾಬ್ ರೈತರನ್ನು ರಾಷ್ಟ್ರ ರಾಜಧಾನಿಯಿಂದ 200 ಕಿಮೀ ದೂರವಿರುವ ಹರ್ಯಾಣ ರಾಜ್ಯದ ಅಂಬಾಲಾ ಬಳಿಯ ಗಡಿಯ ಹತ್ತಿರ ತಡೆಯಲಾಗಿದೆ. ಹರ್ಯಾಣ ಗಡಿಯನ್ನು ಪ್ರವೇಶಿಸಲು ಯತ್ನಿಸಿದ ರೈತರ ಮೇಲೆ ಹರ್ಯಾಣ ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಪ್ರಯೋಗಿಸಿ, ಅವರನ್ನು ಚದುರಿಸಲು ಯತ್ನಿಸಿದವು.
ರೈತರು ಹರ್ಯಾಣದ ಗಡಿಯನ್ನು ದಾಟಿ ಮುನ್ನಡೆದರೂ, ಅವರನ್ನು ರಾಷ್ಟ್ರ ರಾಜಧಾನಿಯೊಳಗೆ ಪ್ರವೇಶಿಸದಂತೆ ತಡೆಯಲು ದಿಲ್ಲಿ ಭದ್ರತಾ ಪಡೆಗಳು ದೃಢ ನಿಶ್ಚಯ ಮಾಡಿವೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.
ಇದರ ಸಿದ್ಧತೆಯ ಭಾಗವಾಗಿ ದಿಲ್ಲಿ ಪೊಲೀಸರು, ಮಧ್ಯಪ್ರದೇಶದ ಟೇಕಾನ್ಪುರದಲ್ಲಿರುವ ಬಿಎಸ್‌ಎಫ್ ಅಶ್ರುವಾಯು ಘಟಕದಿಂದ ಹೆಚ್ಚುವರಿಯಾಗಿ 30,000 ಅಶ್ರುವಾಯು ಶೆಲ್‌ಗಾಗಿ ಬೇಡಿಕೆಯಿರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.