ದಿಲ್ಲಿ ನಿವಾಸಿಗಳ ಕಣ್ಣಲ್ಲಿ ನೀರು ತರಿಸಿದ ದಿಲ್ಲಿ ಪೊಲೀಸರ ರೈತರ ಪ್ರತಿಭಟನೆ ತಡೆ ಕವಾಯತು; ಕಾರಣವೇನು ಗೊತ್ತೆ?
ಹೊಸದಿಲ್ಲಿ: ದಿಲ್ಲಿಯೊಳಗೆ ಪ್ರವೇಶಿಸದಿರಲು ರೈತರು ನಿರಾಕರಿಸಿದರೆ, ಅವರ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸುವ ಅಭ್ಯಾಸದಲ್ಲಿ ತೊಡಗಿದ್ದಾರೆ. NDTV ಸುದ್ದಿ ಸಂಸ್ಥೆಗೆ ಲಭ್ಯವಾಗಿರುವ ವಿಡಿಯೊವೊಂದರಲ್ಲಿ, ಪೊಲೀಸರು ಉತ್ತರ ದಿಲ್ಲಿಯ ಬಯಲೊಂದರಲ್ಲಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸುವ ಅಭ್ಯಾಸದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ನಡುವೆ, ಈ ಅಭ್ಯಾಸದಿಂದ ಸ್ಥಳೀಯರಿಗೆ ತೊಂದರೆಯುಂಟಾಗಿದೆ. ಈ ಕವಾಯತಿನ ನಂತರ ಹಲವಾರು ಜನರು ಕಣ್ಣಿನಲ್ಲಿ ಉರಿಯುವ ಅನುಭವವಾಗುತ್ತಿದೆ ಎಂದು ದೂರಿದ್ದಾರೆ. ಈ ಕುರಿತು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿಯೊಬ್ಬರು, "ನನ್ನ ಕಣ್ಣು ಮತ್ತು ಮೂಗಿನಲ್ಲಿ ಉರಿಯ ಅನುಭವವಾಗುತ್ತಿದೆ. ನನ್ನ ಕಣ್ಣು ಮತ್ತು ಮೂಗು ಕಟ್ಟಿಕೊಂಡಿರುವಂತಿದೆ" ಎಂದು ದೂರಿದ್ದಾರೆ.
ಗುಪ್ತಚರ ವರದಿಗಳ ಪ್ರಕಾರ, ಮಂಗಳವಾರದಂದು ಟ್ರ್ಯಾಕ್ಟರ್‌ಗಳೊಂದಿಗೆ ರೈತರು ದಿಲ್ಲಿಯನ್ನು ಪ್ರವೇಶಿಸಲು ಯತ್ನಿಸುವ ಸಾಧ್ಯತೆ ಇದೆ. ಈ ರೈತರು ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಕೇರಳ ಹಾಗೂ ಕರ್ನಾಟಕದಿಂದ ದಿಲ್ಲಿಗೆ ಆಗಮಿಸುತ್ತಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಸಮಾಜ ವಿರೋಧಿ ಶಕ್ತಿಗಳು ನುಸುಳಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರ ಕಣ್ಣು ತಪ್ಪಿಸಲು, ರೈತರು ಕಾರುಗಳು, ದ್ವಿಚಕ್ರ ವಾಹನಗಳು, ಮೆಟ್ರೊ ಅಥವಾ ಬಸ್‌ಗಳ ಮೂಲಕ ದಿಲ್ಲಿ ಪ್ರವೇಶಿಸಲು ಯತ್ನಿಸಬಹುದು ಎಂದೂ ಪೊಲೀಸರು ಅಂದಾಜಿಸಿದ್ದಾರೆ. ಕೆಲವು ರೈತರು ಮುಂಚಿತವಾಗಿಯೇ ದಿಲ್ಲಿಗೆ ಆಗಮಿಸಿ, ಅತಿ ಗಣ್ಯ ವ್ಯಕ್ತಿಗಳಾದ ಪ್ರಧಾನ ಮಂತ್ರಿ, ಸಚಿವರು ಹಾಗೂ ಬಿಜೆಪಿ ನಾಯಕರ ನಿವಾಸಗಳೆದುರು ಜಮಾಯಿಸಬಹುದು ಎಂದು ಹೇಳಿರುವ ಪೊಲೀಸರು, ಪ್ರತಿಭಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಖಾತರಿ ಹಾಗೂ ರೈತರಿಗೆ ಪಿಂಚಣಿ ಯೋಜನೆ ಜಾರಿ ಸೇರಿದಂತೆ ಹಲವಾರು ಆಗ್ರಹಗಳೊಂದಿಗೆ ರೈತರು ಮಂಗಳವಾರ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.