ರೈತರ ಪ್ರತಿಭಟನೆ: ಮೂವರು ರೈತರು ಮೃತ್ಯು
ಹೊಸದಿಲ್ಲಿ : ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಇನ್ನು ಮೂವರು ರೈತರು ಮೃತಪಟ್ಟಿದ್ದಾರೆ. ಇದರೊಂದಿಗೆ, ಈ ಪ್ರತಿಭಟನೆಯಲ್ಲಿ ಈವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 10ಕ್ಕೆ ಏರಿದೆ.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಕಾನೂನನ್ನು ರೂಪಿಸಬೇಕು ಮತ್ತು ಎಮ್.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಫೆಬ್ರವರಿ 14ರಂದು ಸಾವಿರಾರು ರೈತರು ದಿಲ್ಲಿಗೆ ಮೆರವಣಿಗೆ ಹೊರಟಿದ್ದರು.
ರೈತರು ದಿಲ್ಲಿ ತಲುಪದಂತೆ ಹರ್ಯಾಣ ಪೊಲೀಸರು ಅವರನ್ನು ತಡೆಗಟ್ಟಿದ್ದರು. ರೈತರು ಹರ್ಯಾಣ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಅವರ ವಿರುದ್ಧ ಜಲಫಿರಂಗಿ, ಡ್ರೋನ್ ಗಳು ಮತ್ತು ಅಶ್ರುವಾಯು ಶೆಲ್ ಗಳನ್ನು ಬಳಸಿದ್ದರು.
ಅಂದಿನಿಂದ ರೈತರು ಪಂಜಾಬ್ ಮತ್ತು ಹರ್ಯಾಣ ನಡುವಿನ ಗಡಿಯಲ್ಲಿರುವ ವಿವಿಧ ಸ್ಥಳಗಳಲ್ಲಿ, ಅದರಲ್ಲೂ ಮುಖ್ಯವಾಗಿ ಶಂಭು ಮತ್ತು ಖನ್ನೌರಿ ಪ್ರದೇಶಗಳಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸೋಮವಾರ ಅಮೃತಸರದ ಅಜ್ನಾಲ ಪಟ್ಟಣದ ರೈತ 76 ವರ್ಷದ ಬಲ್ಕಾರ್ ಸಿಂಗ್ ರಾಜ್ಪುರ ರೈಲ್ವೇ ನಿಲ್ದಾಣದಲ್ಲಿ ನಿಧನರಾದರು.
ಲುಧಿಯಾನದ ಪಖೋವಲ್ ಗ್ರಾಮದ ರೈತ 75 ವರ್ಷದ ಬಿಶನ್ ಸಿಂಗ್ ಉಸಿರಾಟದ ಸಮಸ್ಯೆ ಅನುಭವಿಸಿದ ಬಳಿಕ ಸೋಮವಾರ ರಾಜ್ಪುರದ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕೆಲವು ದಿನಗಳ ಹಿಂದೆ ಹರ್ಯಾಣ ಪೊಲೀಸರು ಅಶುವಾಯು ಶೆಲ್ಗಳನ್ನು ಸಿಡಿಸಿದ ಬಳಿಕ ಅವರು ಉಸಿರಾಟದ ತೊಂದರೆಗೆ ಒಳಗಾಗಿದ್ದರು ಎನ್ನಲಾಗಿದೆ.
ರವಿವಾರ, ಭತ್ಲಾನ್ ಗ್ರಾಮದ 40 ವರ್ಷದ ರೈತ ತೆಹಾಲ್ ಸಿಂಗ್ ಸಾವಿಗೀಡಾಗಿದ್ದಾರೆ.