ರೈತರ ʼದಿಲ್ಲಿ ಚಲೋʼ ತಡೆಯಲು ಶಂಭು ಗಡಿಯಲ್ಲಿ ಡ್ರೋನ್ ಮೂಲಕವೂ ಅಶ್ರುವಾಯು ಪ್ರಯೋಗ
ಹೊಸದಿಲ್ಲಿ: ಪಂಜಾಬ್-ಹರ್ಯಾಣ ರಾಜ್ಯಗಳ ಶಂಭು ಗಡಿಯಲ್ಲಿ ಇಂದು ದಿಲ್ಲಿ ಚಲೋ ಪ್ರತಿಭಟನಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ರೈತರು ಜಮಾಯಿಸುತ್ತಿದ್ದಂತೆಯೇ ಅವರ ವಿರುದ್ಧ ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದಾರೆ. ಕೆಲ ಅಶ್ರುವಾಯುವಳನ್ನು ಡ್ರೋನ್‌ಗಳ ಮೂಲಕವೂ ಪ್ರಯೋಗಿಸಲಾಯಿತು.
ಸ್ಥಳದ ತುಂಬಾ ದಟ್ಟ ಹೊಗೆ ಆವೃತವಾಗಿದ್ದು ಕಲ್ಲು ತೂರಾಟವೂ ನಡೆದಿದೆ ಎಂದು ವರದಿಯಾಗಿದೆ. ಒಂದೆಡೆ ಭದ್ರತಾ ಪಡೆಗಳು ರೈತರನ್ನು ತಡೆಯಲು ಇರಿಸಿದ್ದ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನೂ ರೈತರು ತೆರವುಗೊಳಿಸಲು ಸಫಲರಾದರು.
ಸೋಮವಾರ ರಾತ್ರಿ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಪ್ರಮುಖರೊಂದಿಗೆ ರೈತರ ಬೇಡಿಕೆಗಳ ಕುರಿತ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸುಮಾರು 200 ರೈತ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದವು.
ದಿಲ್ಲಿಯ ಗಡಿ ಭಾಗಗಳಲ್ಲಿ ಬದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಕಬ್ಬಿಣದ ಬೇಲಿಗಳು, ಮೊಳೆಗಳು ಮತ್ತು ಕಾಂಕ್ರೀಟ್ ಗೋಡೆಗಳಿಂದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಸನ್ನದ್ಧರಾಗಿದ್ಧಾರೆ. ರಾಜಧಾನಿಯ ಹಲವೆಡೆ ಸಂಚಾರ ನಿರ್ಬಂಧಗಳಿಂದ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ರೈತರ ಪ್ರತಿಭಟನೆಯ ಕುರಿತು ಮಾತನಾಡಿದ ಕೃಷಿ ಸಚಿವ ಅರ್ಜುನ್ ಮುಂಡಾ, “ವಾತಾವರಣವನ್ನು ಕಲುಷಿತಗೊಳಿಸಲು ಹಲವು ಜನರು ಯತ್ನಿಸುತ್ತಿದ್ದಾರೆಂಬ ಮಾಹಿತಿ ಸರ್ಕಾರಕ್ಕಿದೆ. ಇಂತಹ ಶಕ್ತಿಗಳ ಬಗ್ಗೆ ಜಾಗರೂಕರಾಗಿರುವಂತೆ ರೈತರನ್ನು ಕೇಳಿಕೊಳ್ಳುತ್ತೇನೆ,” ಎಂದಿದ್ದಾರೆ.