ಸೂಕ್ತ ಪ್ರಕ್ರಿಯೆಯಿಲ್ಲದೆ, ಪತ್ರಿಕೆಗಳಲ್ಲಿ ಪ್ರಕಟಿಸದೆ ಮನೆಗಳನ್ನು ಧ್ವಂಸಗೊಳಿಸುವುದು ಫ್ಯಾಷನ್ ಆಗಿದೆ: ಮಧ್ಯ ಪ್ರದೇಶ ಹೈಕೋರ್ಟ್

Update: 2024-02-10 10:07 GMT

ಸಾಂದರ್ಭಿಕ ಚಿತ್ರ (PTI)

ಭೋಪಾಲ: ಉಜ್ಜಯಿನಿ ಮಹಾನಗರ ಪಾಲಿಕೆ (ಯುಎಂಸಿ)ಯು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ನೆಲಸಮಗೊಳಿಸಿದ್ದ ಎರಡು ಮನೆಗಳ ಮಾಲಕಿಗೆ ಒಂದು ಲಕ್ಷ ರೂ.ಪರಿಹಾರವನ್ನು ನಾಲ್ಕು ವಾರಗಳಲ್ಲಿ ನೀಡುವಂತೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಆದೇಶಿಸಿದೆ.

ಸುಳ್ಳು ಪಂಚನಾಮೆಯನ್ನು ಸಿದ್ಧಪಡಿಸಿದ್ದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳುವಂತೆಯೂ ನ್ಯಾಯಾಲಯವು ಯುಎಂಸಿ ಆಯುಕ್ತರಿಗೆ ನಿರ್ದೇಶನವನ್ನು ನೀಡಿದೆ.

‘ಈ ನ್ಯಾಯಾಲಯವು ಪದೇ ಪದೇ ಗಮನಿಸಿರುವಂತೆ ಯಾವುದೇ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದೆ, ನೈಸರ್ಗಿಕ ನ್ಯಾಯದ ತತ್ವವನ್ನು ಪಾಲಿಸದೆ ಮತ್ತು ವೃತ್ತಪತ್ರಿಕೆಯಲ್ಲಿ ಪ್ರಕಟಣೆಯನ್ನು ನೀಡದೆ ಯಾವುದೇ ಮನೆಯನ್ನು ನೆಲಸಮಗೊಳಿಸುವುದು ಈಗ ಸ್ಥಳೀಯಾಡಳಿತಗಳು ಮತ್ತು ಸ್ಥಳೀಯ ಸಂಸ್ಥೆಗಳ ಫ್ಯಾಷನ್ ಆಗಿಬಿಟ್ಟಿದೆ. ಈ ಪ್ರಕರಣದಲ್ಲಿ ಅರ್ಜಿದಾರರ ಕುಟುಂಬ ಸದಸ್ಯನೋರ್ವನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಮತ್ತು ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ತೋರುತ್ತಿದೆ ಎಂದು ನ್ಯಾ.ವಿವೇಕ ರೂಸಿಯಾ ತನ್ನ ಆದೇಶದಲ್ಲಿ ಹೇಳಿದ್ದಾರೆ.

ಸೂಕ್ತ ಅನುಮತಿಯಿಲ್ಲದೆ ಅಥವಾ ಅನುಮತಿಯಿದ್ದರೂ ಮಹಾನಗರ ಪಾಲಿಕೆ ಪ್ರದೇಶದಲ್ಲಿಯ ನಿಯಮಗಳಿಗೆ ಬದ್ಧರಾಗದೆ ಮನೆಯನ್ನು ನಿರ್ಮಿಸಲು ಯಾರಿಗೂ ಹಕ್ಕು ಇಲ್ಲ ಎಂದು ಒತ್ತಿ ಹೇಳಿರುವ ನ್ಯಾ.ರೂಸಿಯಾ, ನೆಲಸಮಗೊಳಿಸುವುದು ಕೊನೆಯ ಆಯ್ಕೆಯಾಗಬೇಕು, ಅದೂ ಸಹ ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸಲು ಮಾಲಕರಿಗೆ ನ್ಯಾಯಯುತ ಅವಕಾಶವನ್ನು ನೀಡಿದ ಬಳಿಕ ಎಂದಿದ್ದಾರೆ.

ಯುಎಂಸಿಯ ಆಯುಕ್ತರು ಮತ್ತು ಕಟ್ಟಡ ಅಧಿಕಾರಿ ತನ್ನ ಎರಡು ಮನೆಗಳನ್ನು ಕಾನೂನುಬಾಹಿರವಾಗಿ ಕೆಡವಿದ್ದಕ್ಕಾಗಿ ಪರಿಹಾರವನ್ನು ಕೋರಿ ರಾಧಾ ಲಾಂಗ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ ಪೀಠವು ಈ ತೀರ್ಪನ್ನು ನೀಡಿದೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News