ಮಹಾರಾಷ್ಟ್ರ: ಸರಣಿ ಸಾವು ಸಂಭವಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಶೌಚಾಲಯ ಶುಚಿಗೊಳಿಸಿದ ಶಿವಸೇನೆ ಸಂಸದನ ವಿರುದ್ಧ ಪ್ರಕರಣ ದಾಖಲು

Update: 2023-10-04 08:03 GMT

Photo: PTI

ನಾಂದೇಡ್: ಡಾ. ಶಂಕರ್ ರಾವ್ ಚೌವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಾರ್ಯನಿರತ ಡೀನ್ ಡಾ. ಶ್ಯಾಮರಾವ್ ವಾಕೋಡೆ ಅವರಿಂದ ಶೌಚಾಲಯವನ್ನು ಶುಚಿಗೊಳಿಸಿದ ಆರೋಪವನ್ನು ಆಧರಿಸಿ ಶಿವಸೇನೆಯ ಸಂಸದ ಹೇಮಂತ್ ಪಾಟೀಲ್ ವಿರುದ್ಧ ನಾಂದೇಡ್ ಗ್ರಾಮೀಣ ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ. ಈ ಆಸ್ಪತ್ರೆಯಲ್ಲಿ 31 ಮರಣಗಳು ವರದಿಯಾದ ನಂತರ ಸಂಸದ ಪಾಟೀಲ್ ಬಲವಂತವಾಗಿ ಡೀನ್ ರಿಂದ ಶೌಚಾಲಯ ಶುಚಿಗೊಳಿಸಿದ್ದರು ಎಂದು ಆರೋಪಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

ಸದ್ಯ ಪಾಟೀಲರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ, ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಕ್ರಿಮಿನಲ್ ಬೆದರಿಕೆ ಹಾಗೂ ಮಾನಹಾನಿ ಪ್ರಕರಣಗಳೂ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ದೌರ್ಜನ್ಯ ತಡೆ ಕಾಯ್ದೆ ಹಾಗೂ ಮಹಾರಾರಾಷ್ಟ್ರ ವೈದ್ಯಕೀಯ ಸೇವಾ ನಿರತರು ಹಾಗೂ ಸೇವಾನಿರತ ಸಂಸ್ಥೆಗಳು (ಹಿಂಸಾಚಾರ ಮತ್ತು ಹಾನಿ ಅಥವಾ ಆಸ್ತಿಪಾಸ್ತಿಯ ನಷ್ಟ ತಡೆ) ಕಾಯ್ದೆಯನ್ವಯ ಪಾಟೀಲರ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಾ. ವಾಕೋಡೆಯವರಿಂದ ಸಂಸದ ಪಾಟೀಲ್ ಶೌಚಾಲಯವನ್ನು ಶುಚಿಗೊಳಿಸುವಾಗ, ಅವರ ಸಹಚರರು ಆ ಘಟನೆಯ ದೃಶ್ಯವನ್ನು ವಿಡಿಯೊ ಚಿತ್ರೀಕರಣ ಮಾಡಿದ್ದರು. ನಂತರ, ಸಂಸದರು ಡೀನ್ ಗೆ ಶೌಚಾಲಯವನ್ನು ಶುಚಿಗೊಳಿಸುವಂತೆ ಸೂಚಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಹೇಮಂತ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News