ವಿಮಾನ ಪ್ರಯಾಣ ವಿಳಂಬ; ಇಂಡಿಗೊ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಟಿವಿ ನಿರೂಪಕ ಕಪಿಲ್ ಶರ್ಮಾ
ಮುಂಬೈ: ಇಂಡಿಗೋ ವಿಮಾನಯಾನ ಸಂಸ್ಥೆಯ ಸೇವೆ ಬಗ್ಗೆ ಖ್ಯಾತ ಹಾಸ್ಯ ನಟ ಟಿವಿ ನಿರೂಪಕ ಕಪಿಲ್ ಶರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ವಿಮಾನ ಪ್ರಯಾಣದಲ್ಲಿ ವಿಳಂಬ ಮತ್ತು ಪೈಲಟ್ ಸಂಚಾರದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಸಬೂಬಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು ಕಂಪನಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, "ಡಿಯರ್ ಇಂಡಿಗೊ ಮೊದಲನೆಯದಾಗಿ ನಮ್ಮನ್ನು 50 ನಿಮಿಷಕಾಲ ಬಸ್ ನಲ್ಲಿ ಕಾಯಿಸಿದ್ದೀರಿ. ಇದೀಗ ನಿಮ್ಮ ತಂಡ ಪೈಲಟ್ ಸಂಚಾರದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಹೇಳುತ್ತಿದೆ. ನಿಜವಾಗಿ ಏನು ನಡೆಯುತ್ತಿದೆ? 8 ಗಂಟೆಗೆ ಟೇಕಾಫ್ ಆಗಬೇಕಿತ್ತು. ಈಗ ಸಮಯ ರಾತ್ರಿ 9.20 ಆಗಿದೆ. ಇನ್ನೂ ಕಾಕ್ಪಿಟ್ ನಲ್ಲಿ ಪೈಲಟ್ ಇಲ್ಲ. 180 ಪ್ರಯಾಣಿಕರು ಮತ್ತೆ ಇಂಡಿಗೊದಲ್ಲಿ ಪ್ರಯಾಣಿಸುತ್ತಾರೆ ಎಂದು ನೀವು ಭಾವಿಸುತ್ತೀರಾ?. ಒಮ್ಮೆಯೂ ಇಲ್ಲ" ಎಂದು ಬರೆದಿದ್ದಾರೆ.
ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸುತ್ತಿರುವ ವಿಡಿಯೊವನ್ನು ಶೇರ್ ಮಾಡಿರುವ ಶರ್ಮಾ “ವಿಮಾನ ಬದಲಾವಣೆಯಾಗಿದೆ ಎನ್ನುವುದು ಇದರಿಂದ ಬಹಿರಂಗವಾಗಿದೆ. ಇದೀಗ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿ ಮತ್ತೊಂದು ವಿಮಾನದಲ್ಲಿ ಕಳುಹಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಭದ್ರತಾ ತಪಾಸಣೆಗಾಗಿ ಮತ್ತೆ ಟರ್ಮಿನಲ್ ಗೆ ತೆರಳಬೇಕು" ಎಂದು ವಿವರಿಸಿದ್ದಾರೆ.
ಕಪಿಲ್ ಶರ್ಮಾ ಹಂಚಿಕಿಒಂಡ ವೀಡಿಯೋದಲ್ಲಿ ವಿಮಾನ ವಿಳಂಬದ ಬಗ್ಗೆ ಹಲವು ಪ್ರಯಾಣಿಕರು ಪ್ರಶ್ನಿಸುತ್ತಿರುವುದು ಹಾಗೂ ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕೂ ಎಂದು ಒತ್ತಾಯಿಸುತ್ತಿರುವುದು ಕಾಣಿಸುತ್ತಿದೆ.