ಉತ್ತರ ಭಾರತದಲ್ಲಿ ನೆರೆ, 12 ರಾಜ್ಯಗಳಲ್ಲಿ ಮಳೆ ಅಭಾವ!

ಪಟಿಯಾಲಾದಲ್ಲಿ ಮಂಗಳವಾರ ಭಾರಿ ಮುಂಗಾರು ಮಳೆಯ ಹಿನ್ನೆಲೆ ಬಡಿ ನಾಡಿ ನದಿಯ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಭಾರತೀಯ ಸೇನಾ ಸಿಬ್ಬಂದಿ ರಕ್ಷಿಸುತ್ತಿರುವುದು.

Update: 2023-07-12 03:09 GMT

Photo: PTI

ಹೈದರಾಬಾದ್: ಪಶ್ಚಿಮ ಪ್ರಕ್ಷುಬ್ಧತೆ ಮತ್ತು ಪಶ್ಚಿಮಮುಖಿ ಮುಂಗಾರು ಮಾರುತದಿಂದಾಗಿ ಉತ್ತರ ಭಾರತದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ ಕೇಂದ್ರ ಭಾರತ, ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳಾದ ತೆಲಂಗಾಣ, ಕೇರಳ, ಕರ್ನಾಟಕ, ಬಿಹಾರ, ಜಾರ್ಖಂಡ್ ಸೇರಿದಂತೆ ಒಟ್ಟು 12 ರಾಜ್ಯಗಳಲ್ಲಿ ಇನ್ನೂ ಮಳೆ ಅಭಾವದ ಸ್ಥಿತಿ ಇದೆ ಎಂದು ವರದಿಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜೂನ್ 1ರಿಂದ ತಮಿಳುನಾಡು ಹೊರತುಪಡಿಸಿ ಉಳಿದ ಎಲ್ಲ ದಕ್ಷಿಣ ರಾಜ್ಯಗಳಲ್ಲಿ ಪ್ರಸಕ್ತ ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜುಲೈ ಮೊದಲ ವಾರದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಬಿದ್ದ ವ್ಯಾಪಕ ಮಳೆ ಕರ್ನಾಟಕ ಹಾಗೂ ಕೇರಳದ ಕರಾವಳಿ ಪ್ರದೇಶಕ್ಕೆ ಸೀಮಿತವಾಗಿದ್ದು, ರಾಜ್ಯಗಳ ಇತರೆಡೆಗಳಲ್ಲಿ ಸಾಕಷ್ಟು ಮಳೆಯಾಗಿಲ್ಲ. ಇದರಿಂದಾಗಿ ತೆಲಂಗಾಣ, ಆಂಧ್ರ, ಕರ್ನಾಟಕ ಹಾಗೂ ಕೇರಳದ ಕೆಲವೆಡೆಗಳಲ್ಲಿ ಬಿತ್ತನೆ ಕಾರ್ಯ ವಿಳಂಬವಾಗಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಬರ ಪರಿಸ್ಥಿತಿಯ ಸಾಧ್ಯತೆಯನ್ನು ಅಲ್ಲಿನ ಸರ್ಕಾರಗಳು ಅಂದಾಜಿಸಿವೆ.

ತೆಲಂಗಾಣದಲ್ಲಿ ಜುಲೈ 11ರ ವರೆಗೆ 150.4 ಮಿಲಿಮೀಟರ್ ಮಳೆಯಾಗಿದ್ದು, ವಾಡಿಕೆಯಂತೆ ಈ ಅವಧಿಯಲ್ಲಿ 197.5 ಮಿಲಿಮೀಟರ್ ಮಳೆಯಾಗಬೇಕಿತ್ತು. ಅಂದರೆ ಶೇಕಡ 24ರಷ್ಟು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 395.6 ಮಿಲಿಮೀಟರ್ ಮಳೆ ಬಿದ್ದಿತ್ತು ಎಂದು ತೆಲಂಗಾಣ ರಾಜ್ಯ ಅಭಿವೃದ್ಧಿ ಮತ್ತು ಯೋಜನಾ ಸೊಸೈಟಿಯ ವರದಿ ಹೇಳಿದೆ.

ಕರ್ನಾಟಕದಲ್ಲಿ ಮೈಸೂರು ಹಾಗೂ ಬೆಂಗಳೂರಿಗೆ ಜೀವ ಜಲ ಒದಗಿಸುವ ಕೃಷ್ಣರಾಜಸಾಗರ ಬಹುತೇಕ ಒಣಗಿದ್ದು, ನೀರಿನ ಮಟ್ಟ 30 ಅಡಿಗಿಂತ ಕೆಳಗಿದೆ. ಜಲಾಶಯದ ಗರಿಷ್ಠ ಮಟ್ಟ 124.8 ಅಡಿ. ಕಳೆದ ವರ್ಷ ಈ ಅವಧಿಯಲ್ಲಿ 106.5 ಅಡಿ ನೀರು ಸಂಗ್ರಹವಿತ್ತು.

ಹೈದರಾಬಾದ್ ಹಾಗೂ ಕರ್ನಾಟಕದ ಪ್ರದೇಶಗಳಿಗೆ ನೀರು ಒದಗಿಸುವ ತುಂಗಭದ್ರಾ ಅಣೆಕಟ್ಟಿನಲ್ಲಿ ಕೇವಲ 4.1 ಟಿಎಂಸಿ ನೀರು ಇದ್ದು, ಕಳೆದ ವರ್ಷ ಇದ್ದ 43.9 ಟಿಎಂಸಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಕಾವೇರಿ ಹಾಗೂ ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಮುಂಗಾರಿನ ಮೊದಲ 35 ದಿನಗಳಲ್ಲಿ ವಾಡಿಕೆ ಮಳೆಯ ಮೂರನೇ ಒಂದರಷ್ಟು ಮಾತ್ರ ಮಳೆ ಬಿದ್ದಿದೆ ಎಂದು ಕರ್ನಾಟಕದ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಘಟಕ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News