ಭಾರತ ಹಿಂದೂರಾಷ್ಟ್ರವಾಗಬೇಕಾದರೆ ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕು: ಮಹಾಮಂಡಲೇಶ್ವರ ಸ್ವಾಮಿ
ಭೋಪಾಲ್: ಭಾರತ ಹಿಂದೂಸ್ತಾನವಾಗಬೇಕಾದರೆ, ಎಲ್ಲ ಹಿಂದೂ ಹೆಣ್ಣುಮಕ್ಕಳು ಕನಿಷ್ಠ ನಾಲ್ಕು ಮಂದಿ ಪುತ್ರರನ್ನು ಪಡೆಯಬೇಕು ಎಂದು ಸ್ವಾಮೀಜಿಯೊಬ್ಬರು ಪ್ರಚೋದನಾಕಾರಿ ಭಾಷಣದಲ್ಲಿ ಕರೆ ನೀಡುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆಯುತ್ತಿರುವ ಶ್ರೀಮದ್ ಭಾಗವತ ಕಥಾದಲ್ಲಿ ಪ್ರವಚನ ನೀಡಿದ ಪಂಚಯತಿ ನಿರಾಂಜನಿ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಪ್ರೇಮಾನಂದ ಮಹಾರಾಜ್, ಭಾರತವನ್ನು ಹಿಂದೂಸ್ತಾನವಾಗಿ ಪರಿವರ್ತಿಸಬೇಕಾದರೆ ಕನಿಷ್ಠ ನಾಲ್ಕು ಪುತ್ರರಿಗೆ ಪ್ರತಿಯೊಬ್ಬ ಹಿಂದೂ ಮಹಿಳೆ ಜನ್ಮ ನೀಡಬೇಕು ಎಂದು ಸೂಚಿಸಿದರು.
"ಭಾಗವತ ಪುರಾಣ ಕೂಡಾ ಒಬ್ಬ ವ್ಯಕ್ತಿ 60 ಸಾವಿರ ಮಕ್ಕಳನ್ನು ಹೊಂದಿದ್ದ ಬಗ್ಗೆ ತಿಳಿಸುತ್ತದೆ. ಆದರೆ ಇಂದು ಹಲವು ಮಂದಿ ಒಬ್ಬರು ಅಥವಾ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೆ. ಭಾರತವನ್ನು ಹಿಂದೂಸ್ತಾನವಾಗಿ ಪರಿವರ್ತಿಸಬೇಕಾದರೆ, ಪ್ರತಿ ಕುಟುಂಬ ಕನಿಷ್ಠ ನಾಲ್ಕು ಪುತ್ರರನ್ನು ಹೊಂದಬೇಕು" ಎಂದು ಐದನೇ ದಿನದ ಪ್ರವಚನದಲ್ಲಿ ಸ್ವಾಮಿ ಪ್ರೇಮಾನಂದ ಮಹಾರಾಜ್ ಕರೆ ನೀಡಿದರು.
"ನಮ್ಮ ಉತ್ತರ ಪ್ರದೇಶ ಹೊರಟುಹೋಗಿದೆ. ರಾಜ್ಯದ 17 ಜಿಲ್ಲೆಗಳು ಹಿಂದೂ ಧರ್ಮದ್ದಾಗಿ ಉಳಿದಿಲ್ಲ. ಬಂಗಾಳದ ಅರ್ಧ ಹೋಗಿದೆ. ಅಸ್ಸಾಂನಲ್ಲಿ ಪಾಸ್ಪೋರ್ಟ್ ಇಲ್ಲದ 5 ಲಕ್ಷ ಮಂದಿ ಇದ್ದಾರೆ. ಅವರು (ಅಲ್ಪಸಂಖ್ಯಾತ ಹೆಣ್ಣುಮಕ್ಕಳು) 8-10 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಆದರೆ ನಮ್ಮ ಹಿಂದೂ ಮಾತೆಯರು ಮತ್ತು ಸಹೋದರಿಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಗಮನ ಹರಿಸುತ್ತಿದ್ದಾರೆ" ಎಂದು ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಇದ್ದ ಸಮಾವೇಶದಲ್ಲಿ ವಿಶ್ಲೇಷಿಸಿದರು.
"25 ವರ್ಷ ಹಿಂದೆ ಅಲ್ಪಸಂಖ್ಯಾತರ ಸಂಖ್ಯೆ ಕೇವಲ 2 ಕೋಟಿ ಇತ್ತು. ಬಳಿಕ 9 ಕೋಟಿ ಆಯಿತು. ಇದೀಗ 38 ಕೋಟಿ ಇದ್ದಾರೆ. ಭಾರತ ಇಂಡೋನೇಷ್ಯಾವಾಗುವ ದಿನ ಬಹಳ ದೂರ ಇಲ್ಲ" ಎಂದು ಎಚ್ಚರಿಸಿದರು.