ಮಹರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ
ಹೊಸದಿಲ್ಲಿ: ಲೋಕಸಭಾದ ಮಾಜಿ ಸ್ಪೀಕರ್ ಮನೋಹರ್ ಜೋಶಿ ಶುಕ್ರವಾರ ನಿಧನರಾದರು. ಹೃದಯಾಘಾತಕ್ಕೊಳಗಾದ ಅವರನ್ನು ಬುಧವಾರ ಮುಂಬೈಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
‘ಜೋಶಿ ಸರ್’ ಎಂದೇ ಜನಪ್ರಿಯರಾಗಿದ್ದ ಅವರು 1995-1999ರ ಅವಧಿಯಲ್ಲಿ ಅಧಿಕಾರ ದಲ್ಲಿದ್ದ ಶಿವಸೇನಾ ಸರಕಾರದ ಮೊದಲ ಮುಖ್ಯಮಂತ್ರಿಯಾಗಿದ್ದರು.
ಲೋಕಸಭಾ ಸದಸ್ಯರಾಗಿಯೂ ಚುನಾಯಿತರಾಗಿದ್ದ ಅವರು ವಾಜಪೇಯಿ ಸರಕಾರವು ಅಧಿಕಾರದಲ್ಲಿದ್ದಾಗ 2002ರಿಂದ 2004ರವರೆಗೆ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.
1937ರ ಡಿಸೆಂಬರ್ 2ರಂದು ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರಾಂತದಲ್ಲಿ ಜನಿಸಿದ್ದ ಜೋಶಿ ಅವರು ಪ್ರತಿಷ್ಠಿತ ವೀರಮಾತಾ ಜೀಜಾಬಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆ (ವಿಜೆಟಿಐ) ಮುಂಬೈನಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದರು.
ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ್ದ ಜೋಶಿ ಅವರು 1967ರಲ್ಲಿ ರಾಜಕೀಯವನ್ನು ಪ್ರವೇಶಿಸಿದ್ದರು. ನಾಲ್ಕು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಅವರು ಶಿವಸೇನಾದಲ್ಲಿ ಸಕ್ರಿಯರಾಗಿದ್ದರು. 1968-70ರ ಅವಧಿಯಲ್ಲಿ ಮುಂಬೈ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದರು. 1976-1977ರಲ್ಲಿ ಮುಂಬೈಯ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. 1972ರಲ್ಲಿ ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಮಹಾರಾಷ್ಟ್ರ ವಿಧಾನಪರಿಷತ್ ನಲ್ಲಿ ಮೂರು ಬಾರಿ ಕಾರ್ಯನಿರ್ವಹಿಸಿದ್ದ ಅವರು 1990ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದು, 1990-91ರಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದರು.
1999ರ ಲೋಕಸಭಾ ಚುನಾವಣೆಯಲ್ಲಿ ಜೋಶಿ ಅವರು ಮುಂಬೈ ಉತ್ತರ-ಕೇಂದ್ರ ಕ್ಷೇತ್ರದಿಂದ ಶಿವಸೇನಾ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆಗ ಅಧಿಕಾರಕ್ಕೇರಿದ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಘನ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾಗಿದ್ದರು. 1995ರಲ್ಲಿ ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿದ ಶಿವಸೇನಾ ಸರಕಾರದಲ್ಲಿ ಮುಖ್ಯಮಂತ್ರಿಯಾದರು.
ಮನೋಹರ್ ಜೋಶಿ ನಿಧನಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರವು ‘ರಾಜಕೀಯದ ಸುಸಂಸ್ಕೃತ ಮುಖ’ ವೊಂದನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದರು. ಮನೋಹರ್ ಜೋಶಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಸಂಪುಟದಲ್ಲಿ ಗಡ್ಕರಿ ಸಚಿವರಾಗಿದ್ದರು. ಜೋಶಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ದಾದರ್ ನ ಶಿವಾಜಿಪಾರ್ಕ್ ಚಿತಾಗಾರದಲ್ಲಿ ನೆರವೇರಿತು.