ಸೇನಾ ಟ್ರಕ್ ಮೇಲೆ ಉಗ್ರರ ದಾಳಿ: ಇಬ್ಬರು ಸೈನಿಕರು ಸೇರಿ ನಾಲ್ವರು ಮೃತ್ಯು
ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ನಿಂದ 11 ಕಿಲೋಮೀಟರ್ ದೂರದ ಬೋಟಪತ್ರಿ ಎಂಬಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ಸೇನಾ ಟ್ರಕ್ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 18 ರಾಷ್ಟ್ರೀಯ ರೈಫಲ್ ನ ಇಬ್ಬರು ಸೈನಿಕರು ಹಾಗೂ ಇಬ್ಬರು ಹೊರೆ ಕೂಲಿಯಾಳುಗಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ನಾಲ್ಕನೇ ಉಗ್ರದಾಳಿ ಇದಾಗಿದ್ದು, ಈ ಘಟನೆಯಲ್ಲಿ ಇತರ ಮೂವರು ಸೈನಿಕರು ಹಾಗೂ ಇಬ್ಬರು ಪೋರ್ಟರ್ ಗಳು ಗಾಯಗೊಂಡಿದ್ದಾರೆ.
ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಯೋತ್ಪಾದಕ ವಿರೋಧಿ ದಾಳಿಗಳು ಮತ್ತು ಉಗ್ರರ ದಾಳಿಗಳೆರಡೂ ಈ ವರ್ಷ ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ. ಮೇ 4ರ ಬಳಿಕ ಇದುವರೆಗೆ ಜಮ್ಮು ಪ್ರದೇಶದಲ್ಲಿ 18 ಹಾಗೂ ಕಾಶ್ಮೀರ ಪ್ರದೇಶದಲ್ಲಿ ಆರು ಮಂದಿ ಹೀಗೆ ಭದ್ರತಾ ಪಡೆಗಳ 24 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 20 ಮಂದಿ ಉಗ್ರರು ಬಲಿಯಾಗಿದ್ದಾರೆ. "ಈ ಹಿಂಸಾಕೃತ್ಯಗಳು ಭಯಾನಕ ಮತ್ತು ಬೇಷರತ್ ಖಂಡನಾರ್ಹ" ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಘಟನೆಯನ್ನು ಖಂಡಿಸಿ ಮೃತರ ಕುಟುಂಬಕ್ಕೆ ಅವರು ಸಾಂತ್ವನ ಹೇಳಿರುವ ಅವರು, ಗಾಯಾಳುಗಳು ಸಂಪೂರ್ಣ ಹಾಗೂ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಇನ್ನೊಂದು ಉಗ್ರರ ದಾಳಿ ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಕ್ಷೌರಿಕರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಗಂದೆರ್ಬಾಲ್ ಜಿಲ್ಲೆಯಲ್ಲಿ ಸುರಂಗ ನಿರ್ಮಾಣ ಕಂಪನಿಯ ಏಳು ಮಂದಿ ಉದ್ಯೋಗಿಗಳು ಹತರಾಗಿದ್ದರೆ.