ಜಿ20 ಶೃಂಗಸಭೆ: ಶುಕ್ರವಾರ ದಿಲ್ಲಿಗೆ ಬೈಡನ್, ಸುನಕ್, ಇತರ ನಾಯಕರ ಆಗಮನ
ಹೊಸದಿಲ್ಲಿ: ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಶ್ರೀಮಂತ ದೇಶಗಳ ಮುಖ್ಯಸ್ಥರು ದಿಲ್ಲಿಯಲ್ಲಿ ಸೇರಲಿದ್ದಾರೆ. ಎರಡು ದಿನಗಳ ಕಾಲ ದೇಶದ ರಾಜಧಾನಿಯು ಅಮೆರಿಕದ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇತರ ಅಗ್ರ ನಾಯಕರ ಆತಿಥ್ಯವನ್ನು ವಹಿಸಲಿದೆ.
ಸೆ.9ರಿಂದ ಭಾರತ ಮಂಡಪಂ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿರುವ ಶೃಂಗಸಭೆಯು ಆರ್ಥಿಕತೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಪ್ರಮುಖ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಿದೆ. ಆದಾಗ್ಯೂ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಅನುಪಸ್ಥಿತಿಯು ಎದ್ದು ಕಾಣಲಿದೆ. 2012ರಲ್ಲಿ ಚೀನಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಜಿ20 ಶೃಂಗಸಭೆಗೆ ಗೈರಾಗುತ್ತಿದ್ದಾರೆ. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೂ ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ.
ಬ್ರಿಟನ್: ಭಾರತಕ್ಕೆ ಮೊದಲು ಆಗಮಿಸುವವರಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದ್ದಾರೆ. ಬ್ರಿಟನ್ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿರುವ ಅವರು ಶುಕ್ರವಾರ, ಸೆ.8ರಂದು ಅಪರಾಹ್ನ 1:40ಕ್ಕೆ ದಿಲ್ಲಿಗೆ ಬಂದಿಳಿಯಲಿದ್ದಾರೆ. ಕೇಂದ್ರದ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ ಅವರು ಸುನಕ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.
ಭಾರತಕ್ಕೆ ಆಗಮಿಸುವ ಮುನ್ನ ಮುನ್ನ ಸುನಕ್ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ‘ಕಳೆದ ವರ್ಷದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ನಾನು ಗೌರವಿಸುತ್ತೇನೆ ಮತ್ತು ಭಾರತವು ಇಂತಹ ಜಾಗತಿಕ ನಾಯಕತ್ವವನ್ನು ತೋರಿಸುತ್ತಿರುವುದು ಅದ್ಭುತವಾಗಿದೆ ’ ಎಂದು ಅವರು ಹೇಳಿದ್ದಾರೆ.
ಜಪಾನ್ : ಸುನಕ್ ಅವರನ್ನು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರು ಅನುಸರಿಸಲಿದ್ದಾರೆ. ಅವರ ವಿಮಾನವು ಶುಕ್ರವಾರ ಅಪರಾಹ್ನ 2:15ಕ್ಕೆ ಪಾಲಂ ವಾಯುಪಡೆ ನಿಲ್ದಾಣಕ್ಕೆ ಬಂದಿಳಿಯಲಿದೆ. ಅವರನ್ನೂ ಚೌಬೆಯವರೇ ಸ್ವಾಗತಿಸಲಿದ್ದಾರೆ.
ಇದು ಭಾರತಕ್ಕೆ ಕಿಶಿಡಾರ ಎರಡನೇ ಭೇಟಿಯಾಗಲಿದೆ. ಈ ವರ್ಷದ ಮಾರ್ಚ್ನಲ್ಲಿ ಭಾರತಕ್ಕೆ ಎರಡು ದಿನಗಳ ಭೇಟಿಯನ್ನು ನೀಡಿದ್ದ ಅವರು ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಗೊಳಿಸುವ ಕುರಿತು ಮೋದಿಯವರೊಡನೆ ಮಾತುಕತೆಗಳನ್ನು ನಡೆಸಿದ್ದರು.
ಅಮೆರಿಕ: ಶುಕ್ರವಾರ ಸಂಜೆ 6:55ಕ್ಕೆ ಆಗಮಿಸಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಅವರನ್ನು ಬರಮಾಡಿಕೊಳ್ಳಲು ಕೇಂದ್ರದ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ.ಸಿಂಗ್ ಅವರು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿರಲಿದ್ದಾರೆ. ಬೈಡನ್ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೃಂಗಸಭೆಗೆ ಆಗಮಿಸಲು ಬೈಡನ್ಗೆ ಸಾಧ್ಯವಾಗುತ್ತದೆಯೆ ಇಲ್ಲವೇ ಎಂಬ ಬಗ್ಗೆ ಕೊಂಚ ಅನಿಶ್ಚಿತತೆ ಸೃಷ್ಟಿಯಾಗಿತ್ತು. 80ರ ಹರೆಯದ ಬೈಡನ್ ಅವರ ಕೋವಿಡ್ ಪರೀಕ್ಷೆ ವರದಿಯು ನಕಾರಾತ್ಮಕವಾಗಿದ್ದರಿಂದ ಅವರ ಪ್ರಯಾಣಕ್ಕೆ ಸೆ.6ರಂದು ವೈದ್ಯರು ಹಸಿರು ನಿಶಾನೆಯನ್ನು ತೋರಿಸಿದ್ದಾರೆ.
ಕೆನಡಾ: ಬೈಡನ್ ಬೆನ್ನಿಗೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆಗಮಿಸಲಿದ್ದಾರೆ. ಶುಕ್ರವಾರ ಸಂಜೆ ಏಳು ಗಂಟೆಗೆ ಬಂದಿಳಿಯಲಿರುವ ಅವರನ್ನು ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಳ್ಳಲಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳ ಚಟುವಟಿಕೆಗಳಲ್ಲಿ ಹೆಚ್ಚಳದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗಟ್ಟಿರುವ ಸಂದರ್ಭದಲ್ಲಿ ಟ್ರುಡೊ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಕೆನಡಾ ಭಾರತದೊಂದಿಗೆ ಪ್ರಸ್ತಾವಿತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳಿಗೂ ಅನಿರೀಕ್ಷಿತ ವಿರಾಮವನ್ನು ನೀಡಿದೆ.
ಚೀನಾ: ಚೀನಾ ಪ್ರಧಾನಿ ಲಿ ಕಿಯಾಂಗ್ ಅವರು ಶುಕ್ರವಾರ ರಾತ್ರಿ 7.45ಕ್ಕೆ ಆಗಮಿಸಲಿದ್ದಾರೆ. ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬದಲು ಅವರು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರುವ ಜಿನ್ಪಿಂಗ್ ಅವರ ನಿರ್ಧಾರವು ರಾಜಕೀಯ ವದಂತಿಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಜಿನ್ಪಿಂಗ್ ಅವರು ಶೃಂಗಸಭೆಯಿಂದ ಹೊರಗುಳಿಯುತ್ತಿರುವುದು ವಿಶೇಷವೇನಲ್ಲ. ಅದು ಸಭೆಯಲ್ಲಿ ಒಮ್ಮತದ ಹೇಳಿಕೆಯನ್ನು ಸಿದ್ಧಪಡಿಸಲು ಮಾತುಕತೆಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರತಿಪಾದಿಸಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಅಕ್ಸಾಯಿ ಚಿನ್ ತನ್ನ ಭೂಪ್ರದೇಶಗಳೆಂದು ತೋರಿಸುವ ಭೂಪಟವನ್ನು ಚೀನಾ ಬಿಡುಗಡೆಗೊಳಿಸಿದ ಬಳಿಕ ಉಭಯ ದೇಶಗಳ ನಡುವಿನ ಉದ್ನಿಗತೆ ಉಲ್ಬಣಗೊಂಡಿದೆ.