ದಿಲ್ಲಿಯಲ್ಲಿ ಜಿ20 ಶೃಂಗ ಸಮ್ಮೇಳನ; ಭದ್ರತಾ ಪಡೆಗಳ ನಿದ್ದೆಗೆಡಿಸಿದ ಡ್ರೋನ್ ಹಾರಾಟ

Update: 2023-09-09 16:53 GMT

Photo: PTI 

ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನಕ್ಕಾಗಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ. ಅದರ ಹೊರತಾಗಿಯೂ, ಶುಕ್ರವಾರ ಮಧ್ಯ ದಿಲ್ಲಿಯ ಪಟೇಲ್ ನಗರ ಪ್ರದೇಶದಲ್ಲಿ ಡ್ರೋನ್ ಒಂದು ಹಾರಾಟ ನಡೆಸಿದ್ದು, ಭದ್ರತಾ ಪಡೆಗಳ ನಿದ್ದೆಗೆಡಿಸಿದೆ.

ಮಾಹಿತಿ ಸ್ವೀಕರಿಸಿದ ಬಳಿಕ ಪೊಲೀಸರು ಮೊಕದ್ದಮೆ ದಾಖಲಿಸಿದರು. ಪಟೇಲ್ ನಗರ ಪ್ರದೇಶದಲ್ಲಿ ಹುಟ್ಟುಹಬ್ಬವೊಂದನ್ನು ಆಚರಿಸಲಾಗುತ್ತಿತ್ತು ಹಾಗೂ ಅದರ ಚಿತ್ರ ತೆಗೆಯಲು ಫೋಟೊಗ್ರಾಫರ್ಗಳು ಬಳಸಿದ ಡ್ರೋನ್ ಅದಾಗಿತ್ತು ಎನ್ನವುದು ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಬಯಲಾಯಿತು.

ಸರಕಾರಿ ಅಧಿಕಾರಿಗಳು ನೀಡಿದ ಸೂಚನೆಯನ್ನು ಧಿಕ್ಕರಿಸಿರುವುದಕ್ಕಾಗಿ, ಪೊಲೀಸರು ಭಾರತೀಯ ದಂಡ ಸಂಹಿತೆಯ 188 ಪರಿಚ್ಛೇದದಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ಜಿ20 ಶೃಂಗ ಸಮ್ಮೇಳನ ಆರಂಭಕ್ಕೆ ಮುನ್ನ, ದಿಲ್ಲಿ ಪೊಲೀಸರು ದಿಲ್ಲಿಯನ್ನು ಹಾರಾಟ ನಿಷೇಧ ವಲಯವಾಗಿ ಘೋಷಿಸಿದ್ದರು ಹಾಗೂ ನಗರದ ಭದ್ರತೆಯನ್ನು ಹೆಚ್ಚಿಸಿದ್ದರು. ಜಿ20 ಶೃಂಗ ಸಮ್ಮೇಳನ ಮುಗಿಯುವವರೆಗೆ ನಗರದಲ್ಲಿ ಹಲವಾರು ಸಂಚಾರ ನಿರ್ಬಂಧಗಳನ್ನು ಪೊಲೀಸರು ಘೋಷಿಸಿದ್ದಾರೆ. ಹೊಸದಿಲ್ಲಿ ಜಿಲ್ಲೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ವಲಯವನ್ನು ಶುಕ್ರವಾರ ಮುಂಜಾನೆ 5 ಗಂಟೆಯಿಂದ ರವಿವಾರ ರಾತ್ರಿ 11:59ರವರೆಗೆ ‘ನಿಯಂತ್ರಿತ ವಲಯ-1’ ಎಂಬುದಾಗಿ ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News