ಗಗನಯಾನ ಪರೀಕ್ಷಾ ಅಭಿಯಾನ ಯಶಸ್ವಿ: ಬಂಗಾಳ ಕೊಲ್ಲಿಯಲ್ಲಿ ಇಳಿದ ಕ್ರೂ ಎಸ್ಕೇಪ್ ಮಾಡ್ಯೂಲ್
ಹೊಸದಿಲ್ಲಿ: ಇಸ್ರೋ ತನ್ನ ಗಗನಯಾನ ಅಭಿಯಾನಕ್ಕೆ ಸಂಬಂಧಿಸಿದಂತೆ ಮೊದಲ ಮಾನವರಹಿತ ಹಾರಾಟ ಪರೀಕ್ಷೆಯನ್ನು ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿಯ ಸತೀಶ ಧವನ್ ಅಂತರಿಕ್ಷ ಕೇಂದ್ರದಿಂದ ಯಶಸ್ವಿಯಾಗಿ ನಡೆಸಿತು.
ಚೊಚ್ಚಲ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1(ಟಿವಿ-ಡಿ1)‘ಕ್ರೂ ಎಸ್ಕೇಪ್ ಸಿಸ್ಟಮ್ (ಸಿಇಎಸ್)’ ನ ಸಾಧನೆಯನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿತ್ತು.
ಸಿಇಎಸ್ ಯಾವುದೇ ತುರ್ತು ಸಂದರ್ಭಗಳಿಂದಾಗಿ ಬಾಹ್ಯಾಕಾಶ ಯಾನವು ವಿಫಲಗೊಂಡರೆ ಅಂತರಿಕ್ಷ ನೌಕೆಯಲ್ಲಿನ ಕ್ರೂ ಮಾಡ್ಯೂಲ್‌ನಿಂದ ಯಾನಿಗಳನ್ನು ಸುರಕ್ಷಿತವಾಗಿ ಪಾರು ಮಾಡುವ ವ್ಯವಸ್ಥೆಯಾಗಿದೆ. ಸಿಇಎಸ್ ಮೂಲಕ ಹೊರಕ್ಕೆ ತಳ್ಳಲ್ಪಡುವ ಬಾಹ್ಯಾಕಾಶ ಯಾನಿಗಳನ್ನು ಭೂಮಿಯನ್ನು ತಲುಪಿದ ಬಳಿಕ ಸುರಕ್ಷಿತವಾಗಿ ಹೊರತೆಗೆಯಲಾಗುವುದು. ಕ್ರೂ ಮಾಡ್ಯೂಲ್ ಅಂತರಿಕ್ಷ ನೌಕೆಯಲ್ಲಿ ಯಾನಿಗಳು ವಾಸವಾಗಿರುವ ಭಾಗವಾಗಿದ್ದು, ಒತ್ತಡಕ್ಕೊಳಗಾದ ಲೋಹೀಯ ರಚನೆಯಾಗಿರುವ ಅದರೊಳಗೆ ಭೂಮಿಯಲ್ಲಿನ ವಾತಾವರಣವನ್ನು ಸೃಷ್ಟಿಸಲಾಗಿರುತ್ತದೆ.
ಆರಂಭಿಕ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ ಬಳಿಕ ಶನಿವಾರ ಬೆಳಿಗ್ಗೆ ಟಿವಿ-ಡಿ1 ಹಾರಾಟಕ್ಕೆ ಚಾಲನೆ ನೀಡಲಾಗಿತ್ತು. ಕೆಲವೇ ನಿಮಿಷಗಳಲ್ಲಿ ಮಾಡ್ಯೂಲ್ ಬಂಗಾಳ ಕೊಲ್ಲಿಯಲ್ಲಿ ಇಳಿದಿತ್ತು. ಭಾರತೀಯ ನೌಕಾಪಡೆಯು ಹಡಗು ಮತ್ತು ಮುಳುಗು ತಂಡದ ಮೂಲದ ಅದನ್ನು ಸುರಕ್ಷಿತವಾಗಿ ಹೊರತೆಗೆಯಿತು.
2024ರಲ್ಲಿ ಉಡಾವಣೆಗೊಳ್ಳಲಿರುವ ಗಗನಯಾನ ಅಭಿಯಾನ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವಾಗಲಿದೆ. ಮೂರು ದಿನಗಳ ಅಭಿಯಾನದ ಸಂದರ್ಭದಲ್ಲಿ ಅವರನ್ನು ಭೂಮಿಯಿಂದ 400 ಕಿ.ಮೀ. ಎತ್ತರದಲ್ಲಿಯ ಕೆಳ ಭೂಕ್ಷೆಯಲ್ಲಿ ಇರಿಸಲಾಗುವುದು.
ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಪರೀಕ್ಷಾರ್ಥ ಹಾರಾಟವನ್ನು ನಿಗದಿಗೊಳಿಸಿತ್ತಾದರೂ ತಾಂತ್ರಿಕ ದೋಷದಿಂದಾಗಿ ಅದನ್ನು ನಿಲ್ಲಿಸಲಾಗಿತ್ತು. ದೋಷವನ್ನು ಸರಿಪಡಿಸಿದ ಬಳಿಕ 10 ಗಂಟೆಗೆ ಪರೀಕ್ಷಾರ್ಥ ಹಾರಾಟವನ್ನು ಆರಂಭಿಸಲಾಗಿತ್ತು.