ದೇಶದ ಮೊದಲ ಒಮೈಕ್ರಾನ್-ನಿರ್ದಿಷ್ಟ ಎಂಆರ್‌ಎನ್ಎ ಲಸಿಕೆ ‘ಜೆಮೊವ್ಯಾಕ್-ಒಎಂ’ಗೆ ಚಾಲನೆ ನೀಡಿದ ಸರಕಾರ

Update: 2023-06-24 17:14 GMT

ಸಾಂದರ್ಭಿಕ ಚಿತ್ರ \ Photo: PTI

ಹೊಸದಿಲ್ಲಿ: ಸ್ಥಳೀಯ ಪ್ಲಾಟ್‌ಫಾರ್ಮ್ ತಂತ್ರಜ್ಞಾನವನ್ನು ಬಳಸಿಕೊಂಡು ಜೆನೋವಾ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಒಮೈಕ್ರಾನ್-ನಿರ್ದಿಷ್ಟ ಎಂಆರ್‌ಎನ್ಎ ಆಧಾರಿತ ಜೆಮೊವ್ಯಾಕ್-ಒಎಂ ಬೂಸ್ಟರ್ ಲಸಿಕೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಇಲ್ಲಿ ಬಿಡುಗಡೆಗೊಳಿಸಿದರು.

ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವು ಮಂಡಳಿ (ಬಿಐಆರ್‌ಎಸಿ)ಯ ಧನಸಹಾಯದೊಂದಿಗೆ ಈ ಬೂಸ್ಟರ್ ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ತಿಳಿಸಿದೆ.

ಲಸಿಕೆಯ ವೈಶಿಷ್ಟವೆಂದರೆ ಅದನ್ನು ಸೂಜಿಯನ್ನು ಬಳಸದೆ ನೀಡಬಹುದು.

ಲಸಿಕೆಯು ಇತ್ತೀಚಿಗೆ ಭಾರತದ ಔಷಧಿ ಮಹಾನಿಯಂತ್ರಕರ ಕಚೇರಿಯಿಂದ ತುರ್ತು ಬಳಕೆಗಾಗಿ ಅನುಮತಿಯನ್ನು ಪಡೆದುಕೊಂಡಿತ್ತು.

ಜೆಮೊವ್ಯಾಕ್-ಒಎಂ ಭಾರತೀಯ ಕೋವಿಡ್-19 ಲಸಿಕೆಗಳ ವೇಗವರ್ಧಿತ ಅಭಿವೃದ್ಧಿಗಾಗಿ ಆತ್ಮನಿರ್ಭರ ಭಾರತ 3.0 ಪ್ಯಾಕೇಜ್ ನಡಿ ಡಿಬಿಟಿ ಮತ್ತು ಬಿಐಆರ್‌ಎಸಿ ಜಾರಿಗೊಳಿಸಿರುವ ಮಿಷನ್ ಕೋವಿಡ್ ಸುರಕ್ಷಾದ ಬೆಂಬಲದೊಂದಿಗೆ ಅಭಿವೃದ್ಧಿಗೊಳಿಸಲಾಗಿರುವ ಐದನೇ ಲಸಿಕೆಯಾಗಿದೆ.

ಅನುಷ್ಠಾನಗೊಂಡ ಒಂದು ವರ್ಷದೊಳಗೆ ಮಿಷನ್ ಕೋವಿಡ್ ಸುರಕ್ಷಾ ಕೋವಿಡ್ ಗಾಗಿ ವಿಶ್ವದ ಮೊದಲ ಡಿಎನ್ಎ ಲಸಿಕೆಯ ಅಭಿವೃದ್ಧಿಯಂತಹ ಪ್ರಮುಖ ಸಾಧನೆಗಳನ್ನು ಪ್ರದರ್ಶಿಸಿದೆ ಎಂದು ಹೇಳಿದ ಸಿಂಗ್, ಈ ‘ಭವಿಷ್ಯ ಸಿದ್ಧ ’ ತಂತ್ರಜ್ಞಾನ ವೇದಿಕೆಯನ್ನು ತುಲನಾತ್ಮಕವಾಗಿ ಕಡಿಮೆ ಸಮಯದಲ್ಲಿ ಇತರ ಲಸಿಕೆಗಳನ್ನು ತಯಾರಿಸಲು ಬಳಸಬಹುದಾಗಿದೆ. ಈ ಆವಿಷ್ಕಾರವು ದೇಶದಲ್ಲಿ ಕೊನೆಯ ಹಂತದಲ್ಲಿಯ ವಿತರಣೆಯನ್ನೂ ಸುಲಭವಾಗಿಸುತ್ತದೆ. ಈ ಲಸಿಕೆಯ ವಿತರಣೆಗಾಗಿ ಅಗತ್ಯ ಪೂರೈಕೆ ಸರಪಳಿ ಮೂಲಸೌಕರ್ಯವನ್ನು ನಾವು ಈಗಾಗಲೇ ಹೊಂದಿದ್ದೇವೆ ಎಂದು ತಿಳಿಸಿದರು.

ಲಸಿಕೆಯನ್ನು ಸೂಜಿ ಮುಕ್ತ ಚುಚ್ಚುಮದ್ದು ಸಾಧನವನ್ನು ಬಳಸಿಕೊಂಡು ಒಳಚರ್ಮದ ಮೂಲಕ ನೀಡಲಾಗುತ್ತದೆ. ಅದು ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಗಮನಾರ್ಹವಾಗಿ ಹೆಚ್ಚಿನ ಪ್ರತಿರೋಧಕ ಶಕ್ತಿಯನ್ನು ಸೃಷ್ಟಿಸಿತ್ತು. ಕ್ಲಿನಿಕಲ್ ಫಲಿತಾಂಶಗಳು ಅಪೇಕ್ಷಿತ ಪ್ರತಿರೋಧಕ ಶಕ್ತಿಗಾಗಿ ವಿಭಿನ್ನ-ನಿರ್ದಿಷ್ಟ ಲಸಿಕೆಗಳ ಅಗತ್ಯವನ್ನು ತೋರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News