ಗುಜರಾತ್: ಮಳೆ ಅವಾಂತರಕ್ಕೆ 29 ಬಲಿ

Update: 2024-08-29 02:20 GMT

PC: x.com/ndtv

ಅಹ್ಮದಾಬಾದ್: ಭಾರಿ ಮಳೆ ಮತ್ತು ಭೀಕರ ಪ್ರವಾಹದಿಂದ ತತ್ತರಿಸಿರುವ ಗುಜರಾತ್ ರಾಜ್ಯದಲ್ಲಿ ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಆಗಸ್ಟ್ 30ರವರೆಗೂ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಸೌರಾಷ್ಟ್ರ ಭಾಗದ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಮಳೆ ಸಂಬಂಧಿ ದುರಂತಗಳಲ್ಲಿ ಈಗಾಗಲೇ 29 ಮಂದಿ ಮೃತಪಟ್ಟಿದ್ದು, 18 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ವಾಡಿಕೆ ಮಳೆಯ ಶೇಕಡ 105ರಷ್ಟು ಮಳೆ ಬಿದ್ದಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ತಂಡ ವಿವರಿಸಿದೆ.

ಅಜ್ವಾ ಮತ್ತು ಪ್ರತಾಪಪುರ ಜಲಾಶಯಗಳಿಂದ ವಿಶ್ವಾಮಿತ್ರಿ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಕೆಳಭಾಗದಲ್ಲಿ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ. ವಡೋದರ ಮತ್ತು ಇತರ ನಗರಗಳು ಹಾಗೂ ನದಿಬದಿಯ ಹಲವು ಗ್ರಾಮಗಳಲ್ಲಿ 10-12 ಅಡಿ ನೀರು ನಿಂತಿದೆ.

ವಿಶ್ವಾಮಿತ್ರಿ ನದಿ ದಂಡೆಯಲ್ಲಿರುವ ವಡೋದರ ಪಟ್ಟಣ ಪ್ರವಾಹದಿಂದ ತತ್ತರಿಸಿದೆ. ನದಿ ದಂಡೆಗಳು ಒಡೆದು ವಸತಿ ಪ್ರದೇಶಗಳಿಗೆ ನೀರು ನುಗ್ಗಿ, ಕಟ್ಟಡಗಳು, ರಸ್ತೆ ಹಾಗೂ ವಾಹನಗಳನ್ನು ಕೊಚ್ಚಿಕೊಂಡು ಹೋಗಿವೆ. ರಾಜ್ಯದಲ್ಲಿ 140 ಜಲಾಶಯಗಳು ಹಾಗೂ ಅಣೆಕಟ್ಟುಗಳು ಮತ್ತು 24 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪಡೆ ಅಲ್ಲದೇ ಸೇನೆ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆಗಳ ನೆರವನ್ನೂ ಪರಿಹಾರ ಕಾರ್ಯಗಳಿಗೆ ಒದಗಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News