ಗುಜರಾತ್ | ಸರಣಿ ಹಂತಕ ʼಮಂತ್ರವಾದಿʼಯಿಂದ 12 ಜನರ ಕೊಲೆ!
ಅಹಮದಾಬಾದ್: ಗುಜರಾತ್ ಪೊಲೀಸರ ಕಸ್ಟಡಿಯಲ್ಲಿದ್ದ ʼಮಂತ್ರವಾದಿʼಯೋರ್ವ ರವಿವಾರ ಮೃತಪಟ್ಟಿದ್ದಾನೆ. ಸಾಮಾನ್ಯ ಪ್ರಕರಣವೊಂದಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿತ್ತು, ಆದರೆ ತನಿಖೆಯ ವೇಳೆ ಈತ ಸರಣಿ ಹಂತಕ ಎಂದು ಬಯಲಾಗಿದ್ದು, ಸೋಡಿಯಂ ನೈಟ್ರೈಟ್ ವಿಷಕಾರಿ ರಾಸಾಯನಿಕ ನೀಡಿ 12 ಜನರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಡಿಸೆಂಬರ್ 3ರಂದು ಸಾರ್ಖೇಜ್ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿ ನವಲ್ಸಿನ್ಹ್ ಚಾವ್ಡಾ ಎಂಬಾತನನ್ನು ಬಂಧಿಸಿದ್ದರು. ಈತನ ವಾಮಾಚಾರ ಕೃತ್ಯದ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಆದರೆ ಆರೋಪಿ ರವಿವಾರ ಬೆಳಿಗ್ಗೆ ಕಸ್ಟಡಿಯಲ್ಲಿರುವಾಗ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನಿಖೆಯ ವೇಳೆ ಆರೋಪಿ ನವಲ್ಸಿನ್ಹ್ ಚಾವ್ಡಾ ʼಸೋಡಿಯಂ ನೈಟ್ರೈಟ್ʼ ರಾಸಾಯನಿಕವನ್ನು ಬಳಸಿ 12 ಜನರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ, ಈತ ತನ್ನ ಕೃತ್ಯಕ್ಕೆ ಸೋಡಿಯಂ ನೈಟ್ರೈಟ್ ರಾಸಾಯನಿಕವನ್ನು ತನ್ನ ಹುಟ್ಟೂರಾದ ಸುರೇಂದ್ರನಗರದ ಪ್ರಯೋಗಾಲಯದಿಂದ ಖರೀದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ತನ್ನನ್ನು “ಭುವಜಿ” ಎಂದು ಹೇಳಿಕೊಂಡಿದ್ದು, ಹಣಕಾಸಿನ ತೊಂದರೆ ಸೇರಿದಂತೆ ಜನರ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ತನಗೆ ಇದೆ ಎಂದು ಹೇಳಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.