ಪ್ರಚೋದನೆ ಇಲ್ಲದಿದ್ದರೂ ರೈತರ ಮೇಲೆ ಅಶ್ರುವಾಯು ಬಳಕೆ: ಹರ್ಯಾಣ ಪೊಲೀಸರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಪಟಿಯಾಲ ಡಿಐಜಿ

Update: 2024-02-21 07:21 GMT

ಸಾಂದರ್ಭಿಕ ಚಿತ್ರ (Photo: PTI)

ಹೊಸದಿಲ್ಲಿ: ಕೇಂದ್ರ ಸರಕಾರದ ಐದು ವರ್ಷಗಳ ಕಾಲ ಬೇಳೆ ಕಾಳುಗಳು, ಮೆಕ್ಕೆ ಜೋಳ ಹಾಗೂ ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ಪ್ರಸ್ತಾವವನ್ನು ನಿರಾಕರಿಸಿರುವ ರೈತರು, ಪಂಜಾಬ್ ಮತ್ತು ಹರ್ಯಾಣ ನಡುವಿನ ಎರಡು ಗಡಿ ಭಾಗಗಳಿಂದ ಮತ್ತೆ ತಮ್ಮ ದಿಲ್ಲಿ ಚಲೊ ಮೆರವಣಿಗೆಯನ್ನು ಪುನಾರಂಭಿಸಲು ಮುಂದಾಗಿದ್ದಾರೆ.

ಫೆಬ್ರವರಿ 13ರಂದು ದಿಲ್ಲಿ ಚಲೊ ಮೆರವಣಿಗೆಯನ್ನು ಪ್ರಾರಂಭಿಸಿದ ರೈತರನ್ನು ಹರ್ಯಾಣದ ಗಡಿ ಬಳಿ ತಡೆ ಹಿಡಿದಿದ್ದರಿಂದ ರೈತರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಸಂಘರ್ಷ ನಡೆದಿತ್ತು. ಅಂದಿನಿಂದ ಪಂಜಾಬ್ ಮತ್ತು ಹರ್ಯಾಣ ನಡುವಿನ ಎರಡು ಗಡಿ ಭಾಗಗಳಾದ ಶಂಭು ಹಾಗೂ ಖನೌರಿ ಗಡಿಗಳ ಬಳಿ ರೈತರು ಬೀಡು ಬಿಟ್ಟಿದ್ದಾರೆ.

ಪಂಜಾಬ್-ಹರ್ಯಾಣ ಗಡಿಗಳ ಬಳಿ ಬೀಡು ಬಿಟ್ಟಿರುವ ರೈತರು ತಮ್ಮ ದಿಲ್ಲಿ ಚಲೊ ಮೆರವಣಿಗೆಯನ್ನು ಪುನಾರಂಭಿಸಲು ಮುಂದಾದಾಗ ಅವರ ಮೇಲೆ ಭದ್ರತಾ ಸಿಬ್ಬಂದಿಗಳು ಅಶ್ರುವಾಯು ಶೆಲ್ ದಾಳಿ ನಡೆಸಿದರು. ಇದರಿಂದ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿರುವ ರಾಷ್ಟ್ರ ರಾಜಧಾನಿ ಸುತ್ತಮುತ್ತಲಿನ ಗಡಿಗಳ ಬಳಿ ತೀವ್ರ ಸಂಚಾರ ದಟ್ಟಣೆಯುಂಟಾಯಿತು.

ರೈತರು ಶಂಭು ಗಡಿಯಿಂದ ದೆಹಲಿಯತ್ತ ಮೆರವಣಿಗೆಯನ್ನು ಪ್ರಾರಂಭಿಸಿದಾಗ ಹರಿಯಾಣ ಪೊಲೀಸರು ಯಾವುದೇ ಪ್ರಚೋದನೆ ಇಲ್ಲದೆ 14 ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದಾರೆ ಎಂದು ಪಟಿಯಾಲ ರೇಂಜ್‌ನ ಡಿಐಜಿ ಎಚ್‌ಎಸ್ ಭುಲ್ಲಾರ್ ಬುಧವಾರ ಆರೋಪಿಸಿದ್ದಾರೆ. ಈ ಬಗ್ಗೆ ಹರಿಯಾಣ ಪೊಲೀಸರಲ್ಲಿ ತನ್ನ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಭುಲ್ಲರ್ ಹೇಳಿದ್ದಾರೆ.

ಈ ನಡುವೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಬುಧವಾರ ಮತ್ತೆ ರೈತ ಮುಖಂಡರನ್ನು ಎಂಎಸ್‌ಪಿ ವಿಷಯದ ಕುರಿತು ಚರ್ಚೆಗೆ ಆಹ್ವಾನಿಸಿದ್ದಾರೆ. ನಾಲ್ಕನೇ ಸುತ್ತಿನ ನಂತರ, ಎಂಎಸ್‌ಪಿ ಬೇಡಿಕೆ, ಬೆಳೆ ವೈವಿಧ್ಯೀಕರಣ, ಕಡ್ಡಿ ಸಮಸ್ಯೆ, ಐದನೇ ಸುತ್ತಿನಲ್ಲಿ ಎಫ್‌ಐಆರ್‌ನಂತಹ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News