ಗುಂಟೂರಿನಲ್ಲಿ ಭಾರಿ ಮಳೆ: ಭೂಕುಸಿತಕ್ಕೆ ಐವರು ಬಲಿ, 3 ಮಂದಿ ನೀರುಪಾಲು
ಗುಂಟೂರು: ಆಂಧ್ರಪ್ರದೇಶದ ವಿಜಯವಾಡ ನಗರದಲ್ಲಿ ವ್ಯಾಪಕ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ಈ ಘಟನೆಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ. ಗುಂಟೂರು ಜಿಲ್ಲೆಯ ಹಳ್ಳದಲ್ಲಿ ಕಾರು ಕೊಚ್ಚಿಕೊಂಡು ಹೋಗಿ ಸಂಭವಿಸಿದ ಮತ್ತೊಂದು ದುರಂತದಲ್ಲಿ ಮೂವರು ನೀರುಪಾಲಾಗಿದ್ದಾರೆ.
ವಿಜಯವಾಡ ಪಟ್ಟಣದ ಕೇಂದ್ರಭಾಗದಲ್ಲಿರುವ ಮೊಘಲ್ ರಾಜಪುರಂ ಕಾಲೋನಿಯ ಸುಣ್ಣಪುಬಟ್ಟಿ ಎಂಬಲ್ಲಿ ಭೂಕುಸಿತ ಸಂಭವಿಸಿದೆ. ಬೆಟ್ಟದಿಂದ ಉರುಳಿದ ಬೃಹತ್ ಬಂಡೆಯೊಂದು ಮನೆಗಳನ್ನು ಧ್ವಂಸಗೊಳಿಸಿದೆ. ಒಂದು ಮನೆ ಸಂಪೂರ್ಣ ಧ್ವಂಸವಾಗಿದ್ದು, ಒಳಗಿದ್ದ ನಾಲ್ಕು ಮಂದಿ ಜೀವ ಕಳೆದುಕೊಂಡಿದ್ದಾರೆ. ಇತರ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಪೌರಾಯುಕ್ತ ಎಚ್.ಎಂ.ಧ್ಯಾನಚಂದ್ರ ಸ್ಪಷ್ಟಪಡಿಸಿದ್ದಾರೆ.
ಪೊಲೀಸರು, ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ ಭಾರಿ ಮಳೆ, ತ್ವರಿತ ಕಾರ್ಯಾಚರಣೆಗೆ ತಡೆ ಉಂಟುಮಾಡಿದೆ. ಹಾನಿಗೀಡಾಗಿರುವ ಮನೆಗಳು ಬೆಟ್ಟಕ್ಕೆ ತೀರಾ ಸನಿಹದಲ್ಲಿದ್ದು, ಮತ್ತಷ್ಟು ಭೂಕುಸಿತದ ಭೀತಿ ಇದೆ" ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರನ್ನು ಎಂ.ಮೇಘನಾ (25), ಬೋಲೆಮ್ ಲಕ್ಷ್ಮಿ (49), ಲಾಲು (20) ಮತ್ತು ಅನ್ನಪೂರ್ಣ (55) ಎಂದು ಗುರುತಿಸಲಾಗಿದೆ. ಮೇಘನಾ ದೇಹವನ್ನು ಅವಶೇಷಗಳಡಿಯಿಂದ ಮೊದಲು ಹೊರತೆಗೆಯಲಾಯಿತು. ಉಳಿದ ಮೂವರ ಮೃತದೇಹಗಳನ್ನು ಹೊರತೆಗೆಯಲು ಎಂಟು ಗಂಟೆ ಬೇಕಾಯಿತು. ಮಧ್ಯಾಹ್ನ ಬಳಿಕ ಮತ್ತೊಂದು ಕುಸಿತ ಸಂಭವಿಸಿದ್ದು, ಪರಿಹಾರ ಕಾರ್ಯಾಚರಣೆಗೆ ತಡೆಯುಂಟಾಯಿತು. ಇತರ ಆರು ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದು ಘಟನೆಯಲ್ಲಿ ಶಾಲಾ ಶಿಕ್ಷಕರೊಬ್ಬರು ಹಾಗೂ ಇಬ್ಬರು ವಿದ್ಯಾರ್ಥಿಗಳು ಗುಂಟೂರು ಜಿಲ್ಲೆ ಪಡೆಕಕಾನಿ ತಾಲೂಕು ಉಪ್ಪಲಪಡು ಎಂಬ ಗ್ರಾಮದಲ್ಲಿ ತೊರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸರ್ಕಾರಿ ಶಾಲೆಯ ಗಣಿತ ಶಿಕ್ಷಕ ನಡುಂಪಲ್ಲಿ ರಾಘವೇಂದ್ರ ತಮ್ಮ ಮನೆಗೆ ಇಬ್ಬರು ವಿದ್ಯಾರ್ಥಿಗಳಾದ ಪಶುಪುಲೇಟಿ ಶೌರೀಶ್ (6) ಮತ್ತು ಕೊಂಡೂರಿ ಮನ್ವಿತ್ (9) ಎಂಬವರ ಜತೆ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ.