ಉತ್ತರ ಭಾರತದಲ್ಲಿ ಸೆಪ್ಟೆಂಬರ್ ನಲ್ಲಿ ಭಾರೀ ಮಳೆ: ಐಎಂಡಿ ಮುನ್ನೆಚ್ಚರಿಕೆ
ಹೊಸದಿಲ್ಲಿ: ಮುಂಗಾರು ತನ್ನ ಆಗಸ್ಟ್ ಪ್ರವೃತ್ತಿಯನ್ನು ಈ ತಿಂಗಳು ಕೂಡಾ ಮುಂದುವರಿಸುವ ಸಾಧ್ಯತೆ ಇದ್ದು, ಉತ್ತರ ರಾಜ್ಯಗಳಲ್ಲಿ ಸೆಪ್ಟೆಂಬರ್ನಲ್ಲಿ ಕೂಡಾ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರಾಖಂಡ, ರಾಜಸ್ಥಾನ ಮತ್ತು ಹಿಮಾಚಲ ಹಾಗೂ ಪಂಜಾಬ್ನ ಹಲವೆಡೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಇದು ಪ್ರವಾಹ ಹಾಗೂ ಭೂಕುಸಿತಕ್ಕೂ ಕಾರಣವಾಗಬಹುದು ಎಂದೂ ಐಎಂಡಿ ಎಚ್ಚರಿಸಿದೆ.
ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ವಾಡಿಕೆ ಮಳೆಗಿಂತ ಶೇಕಡ 16ರಷ್ಟು ಅಧಿಕ ಮಳೆಯಾಗಿತ್ತು. ಇದು 2001ರಿಂದೀಚೆಗೆ ಐದನೇ ಗರಿಷ್ಠ ಪ್ರಮಾಣದ ಮಳೆಯಾಗಿದೆ ಮತ್ತು 1901ರಿಂದೀಚೆಗೆ 29ನೇ ಗರಿಷ್ಠವಾಗಿದೆ.
ಆಗಸ್ಟ್ ನಲ್ಲಿ 287 ಮಿಲಿಮೀಟರ್ ಮಳೆಯಾಗಿದ್ದರೂ, ಒಟ್ಟಾರೆ ತಾಪಮಾನವನ್ನು ಕಡಿಮೆ ಮಾಡಿಲ್ಲ. ಆಗಸ್ಟ್ ತಿಂಗಳಲ್ಲಿ ದಾಖಲಾದ ಸರಾಸರಿ ತಾಪಮಾನ 2001ರಿಂದೀಚೆಗೆ ದಾಖಲಾದ ತಾಪಮಾನದ ಪೈಕಿ ಗರಿಷ್ಠ ಹಾಗೂ 1901ರಿಂದೀಚೆಗಿನ ಅಂಕಿ ಅಂಶಗಳ ಪ್ರಕಾರ ನಾಲ್ಕನೇ ಗರಿಷ್ಠ ಪ್ರಮಾಣವಾಗಿದೆ.
ಇದಕ್ಕೆ ಮಳೆ ವ್ಯತ್ಯಯ ಪ್ರಮುಖ ಕಾರಣ ಎನ್ನಲಾಗಿದೆ. ವಾಯವ್ಯ ಭಾರತದಲ್ಲಿ ವಾಡಿಕೆಗಿಂತ ಶೇಕಡ 32ರಷ್ಟು ಅಧಿಕ ಮಳೆಯಾಗಿದ್ದು, ಇದು 2001ರಿಂದೀಚೆಗೆ ಎರಡನೇ ಗರಿಷ್ಠ. ಆದರೆ ದಕ್ಷಿಣ ಪರ್ಯಾಯದ್ವೀಪ ಪ್ರದೇಶದಲ್ಲಿ ಕೇವಲ ಶೇಕಡ 1ರಷ್ಟು ಮಾತ್ರ ಅಧಿಕ ಮಳೆ ಬಿದ್ದಿದೆ.
ಸೆಪ್ಟೆಂಬರ್ ನಲ್ಲಿ ದೇಶಾದ್ಯಂತ ವಾಡಿಕೆಗಿಂತ ಜಾಸ್ತಿ ಮಳೆಯಾಗುವ ನಿರೀಕ್ಷೆ ಇದ್ದು, ಉತ್ತರ ಬಿಹಾರ, ಈಶಾನ್ಯ ಉತ್ತರಪ್ರದೇಶ, ಉತ್ತರ ಭಾರತದ ಬಹುತೇಕ ಭಾಗಗಳು, ವಾಯವ್ಯ ಭಾರತ ಮತ್ತು ದಕ್ಷಿಣ ಪರ್ಯಾಯದ್ವೀಪ ಪ್ರದೇಶದ ಹಲವೆಡೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬೀಳಬಹುದು. ಒಟ್ಟಾರೆ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ದೇಶದಲ್ಲಿ ಈ ಮೊದಲು ಅಂದಾಜಿಸಿದಂತೆ ವಾಡಿಕೆಗಿಂತ ಅಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಪ್ರಕಟಣೆ ಹೇಳಿದೆ.