ಮಹಾ ಮಳೆಗೆ ಮುಂಬೈ ತತ್ತರ; ನಾಲ್ವರು ಮೃತ್ಯು
ಮುಂಬೈ: ಬುಧವಾರ ಸಂಜೆ 5 ಗಂಟೆಯ ಬಳಿಕ ಐದು ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರಿ ಮಳೆ ಮುಂಬೈ ಮಹಾನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಅವಧಿಯಲ್ಲಿ 200 ಮಿಲಿಮೀಟರ್ ಮಳೆ ಬಿದ್ದಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಮಳೆ ಸಂಬಂಧಿ ಅನಾಹುತಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ತೀವ್ರ ಸಂಚಾರ ದಟ್ಟಣೆ, ಕೇಂದ್ರೀಯ ರೈಲ್ವೆಯ ರೈಲು ಸಂಚಾರದಲ್ಲಿ ವ್ಯತ್ಯಯ, ವಿಮಾನಗಳನ್ನು ಬೇರೆಡೆಗೆ ಕಳುಹಿಸಿರುವುದು ಹೀಗಾಗಿ ಜನಸಾಮಾನ್ಯರು ಪರದಾಡುವಂತಾಯಿತು.
ಭೀತರಾದ ಜನತೆ ರಸ್ತೆಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲೇ ಹಲವು ಗಂಟೆಗಳನ್ನು ಕಳೆಯಬೇಕಾಯಿತು. ಗುರುವಾರ ಮುಂಜಾನೆ 8.30ರವರೆಗೂ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಅಂಧೇರಿ ಪೂರ್ವದಲ್ಲಿ 45 ವರ್ಷದ ಮಹಿಳೆಯೊಬ್ಬರು ನಾಲೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರೆ, ಕಲ್ಲಿನ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಲ್ಯಾಣ್ ನಲ್ಲಿ ಮಿಂಚು ಹೊಡೆತಕ್ಕೆ ಬಲಿಯಾಗಿದ್ದಾರೆ. ಝೆನಿತ್ ಜಲಪಾತ ಬಳಿ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮುಂಬೈ, ಥಾಣೆ ಮತ್ತು ರಾಯಗಢದಲ್ಲಿ ಬುಧವಾರ ಘೋಷಿಸಿದ್ದ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ರೆಡ್ ಅಲರ್ಟ್ ಆಗಿ ಪರಿವರ್ತಿಸಿತ್ತು. ಗುರುವಾರ ಇಡೀ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 12 ಗಂಟೆಗಳಲ್ಲಿ ಕೊಲಾಬಾ ವೀಕ್ಷಣಾಲಯದಲ್ಲಿ 70.4ಮಿಮೀ ಮತ್ತು ಸಾಂತಾಕ್ರೂಜ್‌ನಲ್ಲಿ 94.9ಮಿಮೀ ಮಳೆ ದಾಖಲಾಗಿದೆ. ಮನ್ಖುರ್ದ್ (276 ಮಿ.ಮೀ), ಘಟ್ಕೋಪರ್ (259) ಮತ್ತು ಪೊವಾಯ್ (234 ಮಿ.ಮೀ) ಅತಿಹೆಚ್ಚು ಮಳೆಬಿದ್ದ ಪ್ರದೇಶಗಳಾಗಿವೆ.
ಕೇಂದ್ರೀಯ ರೈಲ್ವೆಯ ಮುಖ್ಯ ಹಾಗೂ ಹಾರ್ಬರ್ ಲೈನ್ ಗಳು ತೀವ್ರ ಅಡಚಣೆಗೆ ಒಳಪಟ್ಟವು. ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಪಶ್ಚಿಮ ರೈಲ್ವೆ ಹೇಳಿದೆ. ಹಳಿಗಳಮೇಲೆ ನೀರು ನಿಂತ ಕಾರಣದಿಂದ ರಾತ್ರಿ 8.10ರ ಬಳಿಕ ಮುಖ್ಯ ಲೈನ್ ನ ನಿಧಾನಗತಿಯ ಹಳಿಗಳಲ್ಲಿ ಸಂಚಾರ ರದ್ದುಪಡಿಸಲಾಗಿದೆ. ಥಾಣೆ ರೈಲು ಸೇವೆಗಳು ರಾತ್ರಿ 9.10ಕ್ಕೆ ಪುನಾರಂಭಗೊಂಡವು ಮತ್ತು ಸಿಎಸ್ಎಂಟಿ ಹಳಿಗಳಲ್ಲಿ 9.40ರ ಬಳಿಕ ಸಂಚಾರ ಆರಂಭವಾಯಿತು.