ಹೆಸರಿಗೆ ಮಾತ್ರ ಸೇವಾ ಟ್ರಸ್ಟ್ ಮಾಡಿ ಉದ್ಯಮ ವಿಸ್ತರಣೆಗೆ ಬಳಸಿಕೊಂಡ ರಾಮ್ ದೇವ್ !

Update: 2024-05-21 12:40 GMT

ಯೋಗ ಗುರು ರಾಮದೇವ್‌ (PTI)

ಹೊಸದಿಲ್ಲಿ: ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಛೀಮಾರಿ ಬಳಿಕ ಪತಂಜಲಿ ಸಂಸ್ಥಾಪಕರಾದ ಯೋಗ ಗುರು ರಾಮದೇವ್‌ ಮತ್ತು ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ ಘಟನೆ ನಡೆದ ಕೆಲವೇ ದಿನಗಳ ಬಳಿಕ ಸಂಸ್ಥೆ ವಿರುದ್ಧ ಈಗ ಮತ್ತೊಂದು ಆಪಾದನೆ ಕೇಳಿ ಬಂದಿದೆ.

ರಾಮದೇವ್ ಮತ್ತು ಸಹವರ್ತಿಗಳು ತೆರಿಗೆ ಮುಕ್ತ ಚಾರಿಟೇಬಲ್ ಸಂಸ್ಥೆಯನ್ನು ಸ್ಥಾಪಿಸಿಕೊಂಡು, ಅದನ್ನು ತಮ್ಮ ಉದ್ಯಮವನ್ನು ಬೆಳೆಸುವುದಕ್ಕೆ ಬಳಸುತ್ತಿರುವುದು ಈಗ ಬಯಲಾಗಿದೆ.

ಯೋಗ ಮತ್ತು ಆಯುರ್ವೇದವನ್ನು ಉತ್ತೇಜಿಸಲೆಂದು ಅವರು ಸ್ಥಾಪಿಸಿಕೊಂಡಿರುವ ಪತಂಜಲಿ ಚಾರಿಟೇಬಲ್ ಸಂಸ್ಥೆ ವರ್ಷಗಳಿಂದ ಚಾರಿಟಿಯಾಗಿ ಯಾವ ಕೆಲಸವನ್ನೂ ಮಾಡಿಲ್ಲ. ಬದಲಾಗಿ ತಮ್ಮ ವ್ಯಾಪಾರ ವಿಸ್ತರಣೆಗೆ ಹೋಡಿಕೆ ಮತ್ತು ಫಂಡ್ ಶೇಖರಣೆಗೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ reporters-collective.in ನಲ್ಲಿ ಎಂದು ತಪಸ್ಯಾ ಅವರ ತನಿಖಾ ವರದಿಯಿಂದ ಬಹಿರಂಗಗೊಂಡಿದೆ.

ತನಿಖಾ ವರದಿಯಲ್ಲಿ ಏನೇನಿದೆ?

ತಪಸ್ಯಾ ಅವರ ಈ ವರದಿ, ತೆರಿಗೆ ವಿನಾಯಿತಿ ದತ್ತಿ ಸಂಸ್ಥೆಯನ್ನು ಪೂರ್ತಿಯಾಗಿ ಪತಂಜಲಿಯ ವ್ಯವಹಾರಕ್ಕೆ, ಹಣ ಮತ್ತು ಹೂಡಿಕೆಗೆ ನೆಲೆಯಾಗಿ ಬಳಸಿಕೊಳ್ಳಲಾಗಿರುವುದನ್ನು ಬಿಚ್ಚಿಟ್ಟಿದೆ. 2016ರಲ್ಲಿ, ಪತಂಜಲಿ ಗ್ರೂಪ್‌ಗೆ ಸಂಬಂಧವಿರುವವರು ಸೇರಿ ಯೋಗಕ್ಷೇಮ್ ಸಂಸ್ಥಾನ ಎಂಬ ಲಾಭರಹಿತ ಚಾರಿಟಿ ಕಂಪನಿ ಸ್ಥಾಪಿಸಿದರು.

ಯೋಗ ಮತ್ತು ಆಯುರ್ವೇದ ಕೇಂದ್ರಗಳ ಸ್ಥಾಪನೆ ಮತ್ತು ಉತ್ತೇಜನದ ಉದ್ದೇಶ ಎಂದು ಹೇಳಿ ತೆರಿಗೆ ವಿನಾಯ್ತಿ ಸೌಲಭ್ಯವನ್ನೂ ಪಡೆದಿದ್ದರು. ಆದರೆ ಅದನ್ನು ಅವರು ಹತ್ತಾರು ಕೋಟಿ ರೂಪಾಯಿ ಮೌಲ್ಯದ ಹೂಡಿಕೆಗಳ ನೆಲೆಯಾಗಿ ಬಳಸುತ್ತಿದ್ದಾರೆ.

ತೆರಿಗೆ ಕಾನೂನುಗಳ ಪ್ರಕಾರ, ಅಂತಹ ದತ್ತಿ ಸಂಸ್ಥೆಗಳನ್ನು ತೆರಿಗೆಗಳನ್ನು ಪಾವತಿಸದೆ ಲಾಭ ಗಳಿಸಲು ಬಳಸುವಂತಿಲ್ಲ. ಇಂಥ ಅನೇಕ ಲಾಭರಹಿತ ಸಂಸ್ಥೆಗಳು ಸಣ್ಣ ಉಲ್ಲಂಘನೆಗಳಿಗಾಗಿ ತೆರಿಗೆ ಇಲಾಖೆಯ ತನಿಖೆ ಮತ್ತು ಕಾನೂನು ಕ್ರಮ ಎದುರಿಸಿದ ಉದಾಹರಣೆಗಳಿವೆ. ಆದರೆ ರಾಮ್‌ದೇವ್ ಅವರ ಚಾರಿಟೇಬಲ್ ಸಂಸ್ಥೆ ಯಾವುದೇ ದತ್ತಿ ಕೆಲಸ ಮಾಡದೆ, ಹೂಡಿಕೆಗಾಗಿ ಅದನ್ನು ಬಳಸುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ ಎಂದು reporters-collective.in ವರದಿ ಮಾಡಿದೆ..

ಪತಂಜಲಿ ಅಕ್ರಮಗಳ ಬೆನ್ನುಬಿದ್ದಿರುವ reporters-collective.in ಈ ಹಿಂದಿನ ತನಿಖೆಯಲ್ಲಿ ಪತಂಜಲಿ ಸಮೂಹದ ಹಲವಾರು ಸಂಶಯಾಸ್ಪದ ಮತ್ತು ಶೂನ್ಯ ಆದಾಯದ ಕಂಪನಿಗಳನ್ನು ಹೊಂದಿರುವುದು ಬಯಲಾಗಿತ್ತು.

ಪರಿಸರ ಸೂಕ್ಷ್ಮ ಅರಾವಳಿ ಅರಣ್ಯ ಪ್ರದೇಶದಲ್ಲಿ ಕೂಡ ಲಾಭ ಗಳಿಕೆಗೆ ಪತಂಜಲಿ ಇದೇ ರೀತಿಯಲ್ಲಿ ವ್ಯವಹರಿಸಿತ್ತು. ಆಯುರ್ವೇದ ಔಷಧಗಳು ಮತ್ತು ಉತ್ಪನ್ನಗಳ ತಯಾರಿಕೆಗೆಂದು ಆ ಭೂಮಿಯನ್ನು ಉಲ್ಲೇಖಿಸಲಾಗಿದ್ದರೂ, ಅದು ಬೇರೆಯೇ ವ್ಯವಹಾರವಾಗಿತ್ತು. ಶೂನ್ಯ ಆದಾಯದ ಕಂಪನಿಗಳು, ಮಾಲಕತ್ವದ ಬಗೆಗಿನ ಅಸ್ಪಷ್ಟತೆ, ತೆರಿಗೆ ತಗ್ಗಿಸಲು ಅವಕಾಶವಾಗುವಂತೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹಣದ ಹರಿವಿನಲ್ಲಿನ ಅಸ್ಪಷ್ಟತೆ ಇವೆಲ್ಲವೂ ಇವೆ.

ಯೋಗಕ್ಷೇಮ್ ಸಂಸ್ಥಾನ ಎಂಬ ದತ್ತಿಸಂಸ್ಥೆ ಪತಂಜಲಿ ಸ್ವಾಧೀನಪಡಿಸಿಕೊಂಡಿರುವ ಮತ್ತು ಈಗ ಪತಂಜಲಿ ಫುಡ್ಸ್ ಎಂದು ಬದಲಾಗಿರುವ ರುಚಿ ಸೋಯಾ ಕಂಪನಿಯಲ್ಲಿನ ಹೂಡಿಕೆಯ ಭಾರೀ ಆದಾಯದ ಮೇಲಿನ ತೆರಿಗೆಯನ್ನು ತಪ್ಪಿಸಿಕೊಳ್ಳಲು ಬಳಕೆಯಾಗಿತ್ತು. ತೆರಿಗೆ ವಿನಾಯಿತಿಗಾಗಿ ಪಾಲಿಸಬೇಕಾದ ನಿಯಮಗಳನ್ನು ಪೂರೈಸದಿದ್ದರೂ ತನ್ನ ತೆರಿಗೆ ಮುಕ್ತ ಸೌಲಭ್ಯವನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಅದು ಯಶಸ್ವಿಯಾಗಿದೆ.

ಈ ಬಗ್ಗೆ ಆಚಾರ್ಯ ಬಾಲಕೃಷ್ಣ ಮತ್ತು ಯೋಗಕ್ಷೇಮ್ ಸಂಸ್ಥಾನಕ್ಕೆ ಪ್ರಶ್ನೆಗಳನ್ನು ಕಳಿಸಿದರೂ ಪ್ರತಿಕ್ರಿಯೆ ಬಂದಿಲ್ಲ ಎಂದು reporters-collective.in ಹೇಳಿದೆ.

ರಾಮದೇವ್‌ ಪ್ರಭಾವ ಬೀರಿದ್ದೇ ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಆರೋಪಿಸುವ ಮೂಲಕ. ಅದರೊಂದಿಗೆ ಅವರು ಬಿಜೆಪಿ ಸರ್ಕಾರದ ಜೊತೆ ಗುರುತಿಸಿಕೊಂಡರಲ್ಲದೆ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡುವುದಕ್ಕೂ ನಿಂತರು.

ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುವ ಮೂಲಕ ಪ್ರಭಾವ ಬೀರಿದ್ದ ರಾಮದೇವ್‌, ನಂತರ ಬಿಜೆಪಿ ಸರ್ಕಾರದ ಜೊತೆ ಗುರುತಿಸಿಕೊಂಡರಲ್ಲದೆ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡುವುದಕ್ಕೂ ನಿಂತರು. ತನ್ನನ್ನು ಉತ್ತಮ ಕನ್ಸೂಮರಿಸಂನ ಸಂದೇಶಕಾರ ಎಂದು ಬ್ರಾಂಡ್ ಮಾಡಿಕೊಂಡು, ತನ್ನ ಉದ್ಯಮ ಸಾಮ್ರಾಜ್ಯ ರಾಷ್ಟ್ರ ಸೇವೆಗಾಗಿ ಮತ್ತು ಅಂತರರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಡುವುದಕ್ಕಾಗಿ ಮೀಸಲು ಎಂದು ಬಿಂಬಿಸಿಕೊಂಡರು. ಆದರೆ ಇಂಥ ದೇಶಭಕ್ತ ಸೋಗಿನ ಅವರ ಉದ್ಯಮ ಸಾಮ್ರಾಜ್ಯದಲ್ಲಿ ನಡೆಯುತ್ತಿರುವುದೆಲ್ಲ ಅಕ್ರಮವೇ ಆಗಿದೆ.

ರಾಮ್‌ದೇವ್ ಮತ್ತು ಅವರ ಸಹಚರರು ತಮ್ಮ ಲಾಭ ಹೆಚ್ಚಿಸಲು ಲೆಕ್ಕಪರಿಶೋಧಕರು ಮತ್ತು ವಕೀಲರ ತಂಡಗಳನ್ನು ವ್ಯವಸ್ಥಿತವಾಗಿ ಬಳಸಿರುವ ಬಗ್ಗೆ ತಾನು ಪರಿಶೀಲಿಸಿರುವ ದಾಖಲೆಗಳು ತೋರಿಸುತ್ತಿರುವುದಾಗಿ reporters-collective.in ಹೇಳಿದೆ.

ಯೋಗಕ್ಷೇಮ ಸಂಸ್ಥಾನಕ್ಕೆ ಹೂಡಿಕೆ ಮಾಡಿದ ಪ್ರಮುಖರಲ್ಲಿ ಆಚಾರ್ಯ ಬಾಲಕೃಷ್ಣ ಒಬ್ಬರಾಗಿದ್ದಾರೆ. ಜನಸೇವೆಗಾಗಿ ಹಣ ಬೇಕು ಎಂದು 2016ರಲ್ಲಿ ಹೇಳಿದ್ದ ಆಚಾರ್ಯ ಬಾಲಕೃಷ್ಣ, ಅದೇ ವರ್ಷ ಪತಂಜಲಿ ಸಮೂಹದ ಆಚಾರ್ಯ ಪ್ರದ್ಯುಮ್ನ, ಫೂಲ್ ಚಂದ್ರ, ಸುಮನ್ ದೇವಿ ಮತ್ತು ಸವಿತಾ ಆರ್ಯ ಸೇರಿ ಯೋಗಕ್ಷೇಮ ಸಂಸ್ಥಾನ ಸ್ಥಾಪಿಸಿದರು. ಅದರ ಆರಂಭಿಕ ಬಂಡವಾಳ 4 ಲಕ್ಷ ರೂ. ಇತ್ತು.

ಫೂಲ್ ಚಂದ್ರನನ್ನು ಈಗ ಸ್ವಾಮಿ ಪರಮಾರ್ಥದೇವ್ ಎಂದು ಕರೆಯಲಾಗುತ್ತದೆ. ಅವರು ವರ್ಷಗಳಿಂದ ನಿರ್ಮಾಣ ಕಂಪನಿ ಪ್ಲೆಸೆಂಟ್ ವಿಹಾರ್ ಪ್ರೈವೇಟ್ ಲಿಮಿಟೆಡ್ ಮತ್ತು ಪತಂಜಲಿ ನ್ಯಾಚುರಲ್ ಬಿಸ್ಕೆಟ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 12ಕ್ಕೂ ಹೆಚ್ಚು ಲಾಭರಹಿತ ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ.

(Photo credit: reporters-collective.in)

ಸುಮನ್ ದೇವಿ ಈಗ ಸಾಧ್ವಿ ದೇವಪ್ರಿಯಾ. ಈ ಹೆಸರಿನಲ್ಲಿ ಅವರು ರಾಮದೇವ್ ಸಾಮ್ರಾಜ್ಯದ ಮತ್ತೊಂದು ಸಂಸ್ಥೆಯಾದ ವೇದಿಕ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ರಾಮದೇವ್ ಮತ್ತವರ ಜೊತೆಯವರು ಲಾಭ ಗಳಿಸಲು ನಡೆಸುತ್ತಿರುವ ಇತರ ಕಂಪನಿಗಳಿಗಿಂತ ಭಿನ್ನವಾಗಿ, ಇದನ್ನು ಲಾಭರಹಿತ ಕಂಪನಿಯೆಂದು ಸ್ಥಾಪಿಸಲಾಯಿತು.

ಅದರ ದಾಖಲೆಗಳು ಹೇಳುವ ಪ್ರಕಾರ, ಯೋಗ ಕೇಂದ್ರಗಳು, ಕೌಶಲ್ಯ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜದ ಹಿಂದುಳಿದ ವರ್ಗಗಳಿಗೆ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಉತ್ತೇಜಿಸುವುದು ಕಂಪನಿಯ ಪ್ರಾಥಮಿಕ ಉದ್ದೇಶ. ಆದರೆ ಕಂಪನಿ ಶುರುವಾದಾಗಿನಿಂದಲೂ ಅದರ ಹಣಕಾಸು ದಾಖಲೆಗಳನ್ನು ಪರಿಶೀಲಿಸಿದರೆ, ಅದು ಯಾವುದೇ ಯೋಗ ಅಥವಾ ಆರೋಗ್ಯ ಕೇಂದ್ರಗಳನ್ನು ಹಿಂದುಳಿದವರಿಗೋಸ್ಕರ ಮತ್ತು ಶಿಕ್ಷಣ ಸಂಸ್ಥೆಗಳಿಗಾಗಿ ಸ್ಥಾಪಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ವರದಿ ಹೇಳುತ್ತದೆ.

ಶುರುವಾದ 2ನೇ ವರ್ಷದಲ್ಲೇ ಯೋಗಕ್ಷೇಮ್ ಸಂಸ್ಥೆ ರಾಮದೇವ್ ಸಹವರ್ತಿಗಳ ಅನುಮಾನಾಸ್ಪದ ಹೂಡಿಕೆಯ ನೆಲೆಯಾಗಿ ಬದಲಾದದ್ದನ್ನು reporters-collective.in ಕಂಡುಕೊಂಡಿದೆ.

ಸರ್ಕಾರಕ್ಕೆ ಯೋಗಕ್ಷೇಮ್ ಸಲ್ಲಿಸಿರುವ ದಾಖಲೆಗಳಲ್ಲಿ ಹೇಳಿರುವ ಪ್ರಕಾರ, 2018ರ ಜನವರಿ 5ರಂದು ಬಾಲಕೃಷ್ಣ, ರಾಮದೇವ್ ಅವರ ಮತ್ತೊಬ್ಬ ಆಪ್ತನಾಗಿದ್ದ ದಿ. ಸ್ವಾಮಿ ಮುಕ್ತಾನಂದ್ ಮತ್ತು ಪತಂಜಲಿ ಸಮೂಹದ ಜೊತೆ ಸಂಬಂಧವಿರುವ ಇತರ 6 ಕಂಪನಿಗಳಿಂದ ಅದು ಕಾರ್ಪಸ್ ದೇಣಿಗೆಯನ್ನು ಪಡೆದಿದೆ. ಕಾರ್ಪಸ್ ದೇಣಿಗೆ 79.8 ಕೋಟಿ ರೂ. ಮೌಲ್ಯದ ಪತಂಜಲಿ ಆಯುರ್ವೇದ್ ಲಿಮಿಟೆಡ್ ನ (ಪಿಎಎಲ್) 2.065 ಕೋಟಿ ಷೇರುಗಳ ರೂಪದಲ್ಲಿದೆ. ಇವುಗಳಲ್ಲಿ ಪತಂಜಲಿ ಆಯುರ್ವೇದ್‌ನ ಶೇ.98.54ರಷ್ಟು ಮಾಲಕತ್ವ ಹೊಂದಿರುವ ಬಾಲಕೃಷ್ಣ ಒಬ್ಬರೇ 2 ಕೋಟಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಮೌಲ್ಯ 69.2 ಕೋಟಿ ರೂ. ಅವರು ದೇಣಿಗೆ ನೀಡಿದ್ದ ಆರ್ಥಿಕ ವರ್ಷದಲ್ಲಿ ಪತಂಜಲಿ ಆಯುರ್ವೇದ್ ಮಾರಾಟ ವಹಿವಾಟು 8,136 ಕೋಟಿ ರೂ. ಇತ್ತು.

ಪತಂಜಲಿ ಆಯುರ್ವೇದ ಷೇರುಗಳನ್ನು ದಾನ ಮಾಡಿದ ನಂತರ ಯೋಗಕ್ಷೇಮ್‌ ಸಂಸ್ಥೆಯ ನೂರಕ್ಕೆ ನೂರು ಷೇರುಗಳನ್ನು ರಾಮದೇವ್ ಮತ್ತವರ ಸಹಚರರದ್ಧೇ ಮತ್ತೊಂದು ಕಂಪನಿಯಾದ ಪತಂಜಲಿ ಸೇವಾ ಟ್ರಸ್ಟ್ ಗೆ ನೀಡಲಾಯಿತು. ಅದರೊಂದಿಗೆ ರಾಮದೇವ್ ಯೋಗಕ್ಷೇಮ ಸಂಸ್ಥಾನದ ನಾಮನಿರ್ದೇಶಿತ ಷೇರುದಾರರಾದರು.

ಹಾಗಾಗಿ, ಪತಂಜಲಿ ಆಯುರ್ವೇದ ಷೇರುಗಳನ್ನು ಉಡುಗೊರೆಯಾಗಿ ನೀಡಿದ 24 ಗಂಟೆಗಳಲ್ಲಿ ರಾಮದೇವ್ ಮತ್ತು ಮುಕ್ತಾನಂದ್ ಜೊತೆಗೆ ಬಾಲಕೃಷ್ಣ ಯೋಗಕ್ಷೇಮದ ಪೂರ್ತಿ ನಿಯಂತ್ರಣ ಹೊಂದಿದರು. ಲಾಭೋದ್ದೇಶವಿಲ್ಲದ ಕಂಪನಿಯ ಮೂಲ ಮಾಲೀಕರು ತಮ್ಮ ಷೇರುಗಳನ್ನು ಹಿಂತೆಗೆದುಕೊಂಡರು. ಆದರೂ ಮುಂದಿನ ಕೆಲ ತಿಂಗಳುಗಳವರೆಗೆ ದಾಖಲೆಗಳಲ್ಲಿ ನಿರ್ದೇಶಕರೆಂದು ಅವರು ಹೆಸರುಗಳು ಉಳಿದಿದ್ದವು. ಪತಂಜಲಿ ಆಯುರ್ವೇದ್ ಲಿಮಿಟೆಡ್ ಇನ್ನು ಲಾಭರಹಿತ ಕಂಪನಿಯಾಗಲಿದೆ. ತನ್ನ ಗಳಿಕೆಯನ್ನು ಸಾಮಾಜಿಕ ಸೇವೆಗೆ ತೊಡಗಿಸಲು ಅದು ಬಯಸುತ್ತದೆ ಎಂದು ರಾಮದೇವ್ ಆಗ ಹೇಳಿದ್ದು ವರದಿಯಾಗಿತ್ತು.

ನಾವು ಪತಂಜಲಿಯನ್ನು ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಪಟ್ಟಿ ಮಾಡುವುದಿಲ್ಲ. ಜನರ ಹೃದಯದಲ್ಲಿ ಇಡುತ್ತೇವೆ ಎಂದು ಹೇಳಿದ್ದ ರಾಮದೇವ್, ಅವರ ಮಾತುಗಳಿಗೂ ಆಮೇಲೆ ಯೋಗಕ್ಷೇಮ ಸಂಸ್ಥಾನ ಮಾಡಿದ್ದಕ್ಕೂ ಯಾವ ಸಂಬಂಧವೂ ಇರಲಿಲ್ಲ. ಬದಲಿಗೆ ಬಾಲಕೃಷ್ಣ ಮತ್ತು ರಾಮದೇವ್ ಅವರ ಇತರ ಜೊತೆಗಾರರು ಪತಂಜಲಿ ಆಯುರ್ವೇದ್‌ನಲ್ಲಿ ತಮ್ಮ ಷೇರುಗಳನ್ನು ಇಡಲು ಯೋಗಕ್ಷೇಮ ಸಂಸ್ಥಾನವನ್ನು ಬಳಸಿಕೊಂಡರು. ಗಿಫ್ಟ್ ರೂಪದಲ್ಲಿ ಬಂದಿರುವ 2 ಕೋಟಿ ಷೇರುಗಳನ್ನು ಪಡೆದಿರುವ ಯೋಗಕ್ಷೇಮ್ ಸಂಸ್ಥಾನ ಯೋಗವನ್ನು ಉತ್ತೇಜಿಸುವ ಯಾವುದೇ ಕೆಲಸ ಮಾಡಿಲ್ಲ.

ಒಂದು ಕುತೂಹಲದ ಸಂಗತಿಯೆಂದರೆ, 2017-18 ಮತ್ತು 2018-19ರ ಹಣಕಾಸು ವರ್ಷಗಳಲ್ಲಿ ಯೋಗಕ್ಷೇಮ್ ತನ್ನ ಖಾತೆಯಲ್ಲಿ ಪತಂಜಲಿ ಆಯುರ್ವೇದ್ ಷೇರುಗಳ ಕಾರ್ಪಸ್ ದೇಣಿಗೆಯನ್ನು ತೋರಿಸಿತ್ತು. ಆದರೆ ಪತಂಜಲಿ ಆಯುರ್ವೇದ್‌ ಹಣಕಾಸು ದಾಖಲೆಗಳಲ್ಲಿ ಮಾತ್ರ ಬಾಲಕೃಷ್ಣ ಅವರೇ ಶೇ.98.54 ಷೇರುಗಳ ಮಾಲಕರೆಂದು ದಾಖಲಾಗುವುದು ಮುಂದುವರೆದಿದೆ.

ತಾಂತ್ರಿಕವಾಗಿ, ಒಂದೇ ಷೇರುಗಳು ಎರಡು ಘಟಕಗಳ ಸ್ವಾಧೀನದಲ್ಲಿರಲಾಗದು. ಈ ವಿಲಕ್ಷಣ ವಿಚಾರಕ್ಕೆ ಕಡೆಗೆ ಅವರು ಉತ್ತರಿಸಬೇಕಾಗಿ ಬಂತು. ಆದರೆ ಬ್ಯಾಲೆನ್ಸ್ ಶೀಟ್‌ಗಳಲ್ಲಿ ಉತ್ತರವನ್ನು ಸಣ್ಣದಾಗಿ ಮುದ್ರಿಸಲಾಗಿತ್ತು. ಮತ್ತದರಲ್ಲಿ ತಾಂತ್ರಿಕ ವಿವರವೇ ತುಂಬಿತ್ತು. ಸರಳವಾಗಿ, ಯೋಗಕ್ಷೇಮ ಸಂಸ್ಥೆಗೆ ದೇಣಿಗೆಯಾಗಿ ನೀಡಲಾದ ಈ ಷೇರುಗಳನ್ನು ಬಾಲಕೃಷ್ಣ ಅವರು ಸಾಲ ಪಡೆಯುವುದಕ್ಕಾಗಿ ಬ್ಯಾಂಕ್‌ಗಳಲ್ಲಿ ಒತ್ತೆಯಿಟ್ಟಿದ್ದರು ಎಂಬುದು ಅದರ ಸಾರಾಂಶವಾಗಿತ್ತು.

ತಮ್ಮಲ್ಲಿ ಆಧಾರವಾಗಿಟ್ಟಿದ್ದನ್ನು ಯೋಗಕ್ಷೇಮ್ ಸಂಸ್ಥಾನಕ್ಕೆ ಹಸ್ತಾಂತರಿಸುವುದಕ್ಕೆ ಬ್ಯಾಂಕ್ ಗಳು ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ಷೇರು ವರ್ಗಾವಣೆಯನ್ನು 2020-21ರ ಹಣಕಾಸು ವರ್ಷದಲ್ಲಿ ಹಿಂತಿರುಗಿಸಬೇಕಾಗಿತ್ತು, ಇದು ಹೂಡಿಕೆಗೆ ಯೋಗಕ್ಷೇಮ ಸಂಸ್ಥಾನಮ್ ಬಳಸುವುದಕ್ಕೆ ತಡೆಯಾಯಿತು. ಅದೇ ಸಮಯದಲ್ಲಿ ಪತಂಜಲಿ 2019ರ ಡಿಸೆಂಬರ್ ನಲ್ಲಿ ರುಚಿ ಸೋಯಾ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು, 12,000 ಕೋಟಿ ರೂ.ಗಿಂತ ಹೆಚ್ಚಿನ ಸಾಲದ ಹೊರೆ ಹೊತ್ತಿದ್ದ ರುಚಿ ಸೋಯಾ ಎದುರು ದಿವಾಳಿತನದ ಕಾನೂನಿನಡಿ ಎರಡು ಆಯ್ಕೆಗಳಿದ್ದವು.

ಸ್ವಲ್ಪವಾದರೂ ಸಾಲ ಪಾವತಿಸಬಲ್ಲ ಖರೀದಿದಾರರೊಬ್ಬರನ್ನು ಕಂಡುಕೊಳ್ಳುವುದು ಇಲ್ಲವೆ ಕಂಪನಿಯನ್ನು ತುಂಡು ತುಂಡಾಗಿ ಮಾರುವುದು ಅನಿವಾರ್ಯವಾಗಿತ್ತು. ಅದಾನಿ ಗ್ರೂಪ್ ಕೊನೆಯ ಗಳಿಗೆಯಲ್ಲಿ ಹರಾಜಿನಿಂದ ಹಿಂದೆ ಸರಿದ ಬಳಿಕ ರಾಮದೇವ್ ವಶಕ್ಕೆ ಕಂಪನಿ ಬಂತು. ಎಸ್‌ಬಿಐ ಮತ್ತು ಯೂನಿಯನ್ ಬ್ಯಾಂಕ್‌ಗಳಂತಹ ಬ್ಯಾಂಕ್‌ಗಳು ಪತಂಜಲಿ ಒಕ್ಕೂಟಕ್ಕೆ ಅದನ್ನು ಖರೀದಿಸಲು ಸಾಲ ನೀಡಿವೆ.

ಪತಂಜಲಿಯ 4350 ಕೋಟಿ ರೂ. ಬಿಡ್ ಅನ್ನು 2019ರ ಡಿಸೆಂಬರ್ ನಲ್ಲಿ ಅನುಮೋದಿಸಲಾಯಿತು ಮತ್ತು 2022ರ ಜೂನ್ ನಲ್ಲಿ ರುಚಿ ಸೋಯಾ ಕಂಪನಿ ಪತಂಜಲಿ ಫುಡ್ಸ್ ಆಯಿತು. ಯೋಗಕ್ಷೇಮ್ ಈಗ ರುಚಿ ಸೋಯಾದಲ್ಲಿ ರಾಮ್‌ದೇವ್ ಮತ್ತು ಅವರ ಸಹವರ್ತಿಗಳ ಹೂಡಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

2020-21 ರ ಆರ್ಥಿಕ ವರ್ಷದಲ್ಲಿ ಯೋಗಕ್ಷೇಮ ತನ್ನಲ್ಲಿನ 79 ಕೋಟಿಯ ಪತಂಜಲಿ ಆಯುರ್ವೇದ ಷೇರುಗಳನ್ನು ಹಿಂತಿರುಗಿಸಿದ ನಂತರ, ಪತಂಜಲಿ ಸಮೂಹದ ಭಾಗವಾಗಿರುವ ದಿವ್ಯ ಯೋಗ ಮಂದಿರ ಟ್ರಸ್ಟ್ ಯೋಗಕ್ಷೇಮಕ್ಕೆ 42 ಕೋಟಿ ರೂಪಾಯಿ ಮೌಲ್ಯದ ರುಚಿ ಸೋಯಾದ 6 ಕೋಟಿ ಷೇರುಗಳನ್ನು ಉಡುಗೊರೆಯಾಗಿ ನೀಡಿತು. ಇದರೊಂದಿಗೆ ಯೋಗಕ್ಷೇಮ ರುಚಿ ಸೋಯಾ ಕಂಪನಿಯ ಶೇ.20.28 ಮಾಲಕತ್ವ ಪಡೆಯಿತು.

ಹೂಡಿಕೆಯನ್ನು ಯೋಗಕ್ಷೇಮದಲ್ಲಿ ಮಾಡುವುದರೊಂದಿಗೆ ದಿವ್ಯ ಯೋಗ ಮಂದಿರ ಟ್ರಸ್ಟ್ ಪತಂಜಲಿ ಸೇವಾ ಟ್ರಸ್ಟ್ ನ ಶೇ.60ರಷ್ಟು ಷೇರುಗಳನ್ನು ಹೊಂದಿತು ಮತ್ತು ಬಹುಪಾಲು ಮಾಲಕತ್ವವನ್ನು ತನ್ನದಾಗಿಸಿಕೊಂಡಿತು. ಲಾಭ ಮಾಡುವ ಕಂಪನಿಯಲ್ಲಿನ ಷೇರುಗಳ ಈ ರೀತಿಯ ಹರಿದಾಡುವಿಕೆ ಕಂಪನಿಯ ನಿಜವಾದ ಹಿಡಿತ ಯಾರ ಬಳಿಯಿದೆ ಮತ್ತು ಯಾರು ಲಾಭ ಮಾಡಿಕೊಳ್ಳುತ್ತಿದ್ಧಾರೆ ಎಂಬುದನ್ನು ಅಸ್ಪಷ್ಟವಾಗಿಡಲು ನೆರವಾಗುತ್ತದೆ.

ಯೋಗಕ್ಷೇಮ್ ಸಂಸ್ಥಾನದ ಮಾಲಕತ್ವ ಪ್ರತಿ ವರ್ಷವೂ ಬದಲಾಗಿದೆ. 2020-21ರಲ್ಲಿ ದಿವ್ಯ ಯೋಗ ಮಂದಿರ ಶೇ.60ರಷ್ಟು ಪಾಲನ್ನು ಪಡೆದ ಒಂದು ವರ್ಷದ ನಂತರ ಅದನ್ನು ಪತಂಜಲಿ ರಿಸರ್ಚ್ ಫೌಂಡೇಶನ್ ಟ್ರಸ್ಟ್ ಎಂಬ ಮತ್ತೊಂದು ಪತಂಜಲಿ ಟ್ರಸ್ಟ್ ಗೆ ವರ್ಗಾಯಿಸಿತು.

ಆ ಟ್ರಸ್ಟ್ ಮುಂದಿನ ಆರ್ಥಿಕ ವರ್ಷದಲ್ಲಿ ಮತ್ತೊಂದು ಲಾಭರಹಿತ ಕಂಪನಿಯಾದ ಪತಂಜಲಿ ಫುಡ್ ಅಂಡ್ ಹರ್ಬಲ್ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ ತನ್ನ ಪಾಲನ್ನು ಬಿಟ್ಟುಕೊಟ್ಟಿತು.

ಯೋಗಕ್ಷೇಮ್ ಸಂಸ್ಥೆ ಚಾರಿಟಿಯಲ್ಲಿ ತೊಡಗಿಕೊಂಡಿಲ್ಲ ಮತ್ತು ಕೇವಲ ಹೂಡಿಕೆಗಳನ್ನು ಹೊಂದಿರುವ ಬಗ್ಗೆ ತಾನು ಕೇಳಿರುವ ಪ್ರಶ್ನೆಗಳಿಗೆ ಆಚಾರ್ಯ ಬಾಲಕೃಷ್ಣ ಮತ್ತು ಯೋಗಕ್ಷೇಮ್ ಸಂಸ್ಥಾನ ಉತ್ತರಿಸಿಲ್ಲ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ತನ್ನ ವರದಿಯಲ್ಲಿ ಹೇಳಿದೆ. ಮಾಲಕತ್ವದಲ್ಲಿನ ಬದಲಾವಣೆಯ ಕುರಿತು ಪತಂಜಲಿ ಆಯುರ್ವೇದ್, ಪತಂಜಲಿ ಫುಡ್ಸ್ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್ ಗೆ ಕೇಳಲಾಗಿರುವ ಪ್ರಶ್ನೆಗಳಿಗೂ ಉತ್ತರ ಬಂದಿಲ್ಲ ಎಂದು ವರದಿ ಹೇಳಿದೆ.

ದತ್ತಿ ಸಂಸ್ಥೆಯಾಗಿ, ಯೋಗಕ್ಷೇಮ್ ಸಂಸ್ಥಾನ ಆದಾಯ ತೆರಿಗೆ ಕಾಯಿದೆ, 1961ರ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆದಿದೆ. ಕಂಪನಿ ತನ್ನ ದತ್ತಿ ಕಾರ್ಯದಲ್ಲಿ ಕನಿಷ್ಠ ಶೇ.85ರಷ್ಟು ಹಣ ಬಳಸಿದರೆ ಅದು ತನ್ನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

ಆದರೆ, ಯೋಗವನ್ನು ಉತ್ತೇಜಿಸಲು ಏನನ್ನೂ ಮಾಡದ ಯೋಗಕ್ಷೇಮ್, 2022-23ರಲ್ಲಿ ಹೊಂದಿದ್ದ ರುಚಿ ಸೋಯಾ ಷೇರುಗಳ ಮೇಲೆ 30 ಕೋಟಿ ರೂ. ಲಾಭಾಂಶ ಗಳಿಸಿದೆ. ಈ ಆರ್ಥಿಕ ವರ್ಷದಲ್ಲಿ 19.43 ಕೋಟಿಗಳನ್ನು, ಅಂದರೆ ರುಚಿ ಸೋಯಾ ಷೇರುಗಳ ಮೂಲಕ ಗಳಿಸಿದ್ದ ಆದಾಯದ ಶೇ.60ಕ್ಕಿಂತ ಸ್ವಲ್ಪ ಹೆಚ್ಚನ್ನು ಬಹಿರಂಗಪಡಿಸದ ಸಂಸ್ಥೆಗಳಿಗೆ ದೇಣಿಗೆಗೆಂದು ಖರ್ಚು ಮಾಡಿದೆ.

ಆದರೆ, ಯೋಗಕ್ಷೇಮ ಸಂಸ್ಥಾನವನ್ನು ಯಾವುದಕ್ಕಾಗಿ ಬಳಸಲಾಗುತ್ತಿದೆ ಎಂಬ ಕಳಂಕ ಅದರಿಂದ ಬಗೆಹರಿದಂತಾಗುವುದಿಲ್ಲ. ಅದು ದತ್ತಿ ಸಂಸ್ಥೆ ಎಂದು ಹೇಳಿಕೊಳ್ಳುತ್ತಲೇ ಇದೆ. ಸರ್ಕಾರ ಕೂಡ ಅದರ ತೆರಿಗೆ ಮುಕ್ತ ಸ್ಥಿತಿಯನ್ನು ಮುಂದುವರೆಸಿದೆ.

ಅದರ ಇತ್ತೀಚಿನ ಹಣಕಾಸು ದಾಖಲೆಗಳ ಪ್ರಕಾರ, ರುಚಿ ಸೋಯಾ ಅಂದರೆ ಪತಂಜಲಿ ಫುಡ್ಸ್ ನಲ್ಲಿ ಅದು ಶೇ.16.52ರಷ್ಟು ಪಾಲನ್ನು ಹೊಂದಿದೆ.

ಕೃಪೆ: reporters-collective.in

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News