ದಿಲ್ಲಿಯಲ್ಲಿ ವಾಯುಮಾಲಿನ್ಯ ತಗ್ಗಿಸಲು ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆ
ಹೊಸದಿಲ್ಲಿ: ತಮ್ಮ ಏಳು ಮಂದಿಯ ಕುಟುಂಬವನ್ನು ಪೋಷಿಸಲು ತೋತಾರಾಮ್ ಮೌರ್ಯ ಹೊಸ ದಿಲ್ಲಿಯಲ್ಲಿನ ನಿರ್ಮಾಣ ಹಂತದ ನಿವೇಶನಗಳಲ್ಲಿ ಇಟ್ಟಿಗೆ ಹಾಗೂ ಸಿಮೆಂಟ್ ಮೂಟೆಗಳನ್ನು ಹೊರುವ ಕೆಲಸ ಮಾಡುತ್ತಾರೆ. ಆದರೆ, ನಗರದಾದ್ಯಂತ ಹರಡಿರುವ ವಿಷಪೂರಿತ ಮುಸುಕನ್ನು ತಗ್ಗಿಸುವ ಗುರಿಯೊಂದಿಗೆ ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ನಿಷೇಧ ಹೇರಿರುವುದರಿಂದ ಕೆಲಸವಿಲ್ಲದೆ ಆತ ಕಳೆದ 10 ದಿನಗಳಿಂದ ತನ್ನ ಮನೆಯಲ್ಲೇ ಉಳಿಯಬೇಕಾಗಿ ಬಂದಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಒಂದು ವೇಳೆ ನಾನು ವಾಯು ಮಾಲಿನ್ಯದಿಂದ ಅನಾರೋಗ್ಯಪೀಡಿತನಾಗಿ ಸಾಯುವುದಿದ್ದರೆ, ನನಗೆ ಉಣಿಸಲು ಬಾಯಿಗಳಿರುವುದರಿಂದ ಕೆಲಸ ಮಾಡುವಾಗಲೇ ಸಾಯಲು ಬಯಸುತ್ತೇನೆ” ಎನ್ನುತ್ತಾರೆ ಮೌರ್ಯ. ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಿರುವುದರಿಂದ ಯಮುನಾ ನದಿ ದಂಡೆಯ ಮೇಲಿರುವ ಅವರ ಬೊಂಬಿನ ಗುಡಿಸಲಿನ ಮೇಲೆ ಮಂಕು ಕವಿದಿದೆ.
2 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದಿಲ್ಲಿಯು ವಿಶ‍್ವದ ಅತ್ಯಂತ ಮಲಿನಗೊಂಡ ನಗರವಾಗಿದೆ. ಸರ್ಕಾರವು ಮಾಲಿನ್ಯ ಸಮಸ್ಯೆಯನ್ನು ಪರಿಹರಿಸುವುದಾಗಿ ಪ್ರತಿಜ್ಞೆ ಮಾಡಿದ್ದರೂ, ಪ್ರತಿ ವರ್ಷವೂ ಆಗುವಂತೆ ಈ ತಿಂಗಳ ಆರಂಭದಲ್ಲೂ ಕೂಡಾ ಇಲ್ಲಿನ ವಾಯು ಗುಣಮಟ್ಟ ಹದಗೆಟ್ಟಿದೆ.
ಧೂಳು ಹಾಗೂ ವಾಹನಗಳ ಹೊಗೆಯನ್ನು ತಗ್ಗಿಸಲು ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ನಿಷೇಧ ವಿಧಿಸುವುದು ಇದು ಹೊಸತೇನೂ ಅಲ್ಲ.
ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷತಾ ಮಟ್ಟಕ್ಕಿಂತ ಸರಿಸುಮಾರು 20 ಪಟ್ಟು ಅಧಿಕವಿರುವ ಸೂಕ್ಷ್ಮ ಕಣಗಳನ್ನು ನಿವಾರಿಸಲು ಪ್ರಾಧಿಕಾರಗಳು ಹೋರಾಟ ನಡೆಸುತ್ತಿದ್ದು, ಇದರ ಭಾಗವಾಗಿ ವಿಧಿಸಲಾಗಿರುವ ಕಟ್ಟಡ ನಿರ್ಮಾಣಗಳ ಮೇಲಿನ ನಿಷೇಧದಿಂದ ಮೌರ್ಯರಂಥ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದಂತಾಗಿದ್ದಾರೆ.
45 ವರ್ಷದ ಮೌರ್ಯ ಪ್ರತಿ ದಿನ ಸಾಮಾನ್ಯವಾಗಿ ರೂ. 500 ಸಂಪಾದಿಸುತ್ತಾರೆ.
ಭಾರತದಲ್ಲಿ ಕೃಷಿಯ ನಂತರ ಕಟ್ಟಡ ನಿರ್ಮಾಣ ಕಾಮಗಾರಿ ವಲಯವು ಉದ್ಯೋಗ ಸೃಷ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಲಯವು ಕೌಶಲರಹಿತ ಕಾರ್ಮಿಕರೊಂದಿಗೆ ಒಟ್ಟು 70 ಲಕ್ಷ ಮಂದಿಗೆ ಉದ್ಯೋಗ ಒದಗಿಸಿದ್ದು, ಉತ್ತಮ ಜೀವನ ನಡೆಸುವ ಬಯಕೆಯಲ್ಲಿ ಲಕ್ಷಾಂತರ ಮಂದಿ ದೇಶದ ವಿವಿಧ ಭಾಗಗಳಿಂದ ನಗರಗಳಿಗೆ ವಲಸೆ ಬರುತ್ತಾರೆ.
ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಈ ಹಿಂದೆ ನಿಷೇಧ ಹೇರಿದ್ದಾಗಲೆಲ್ಲ ದಿಲ್ಲಿ ಸರ್ಕಾರವು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೊಂಚ ಮಟ್ಟಿನ ಪರಿಹಾರ ಧನ ವಿತರಿಸಿತ್ತು. ಆದರೆ, ಈ ಬಾರಿ ಅವರಿಗೆ ಯಾವುದೇ ಪರಿಹಾರ ಧನ ನೀಡಲಾಗಿಲ್ಲ.
ಈ ನಿಷೇಧದಿಂದ ಕೇವಲ ಕಾರ್ಮಿಕರು ಮಾತ್ರ ಸಂತ್ರಸ್ತರಾಗಿಲ್ಲ; ಬದಲಿಗೆ ಡೆವಲಪರ್ ಗಳಿಗೂ ತೊಂದರೆಯಾಗಿದೆ.
“ಧೂಳಿನ ನಿಯಂತ್ರಣಕ್ಕಾಗಿ ಎಲ್ಲ ಪರಿಪಾಲನಾ ಅಗತ್ಯಗಳು ಹಾಗೂ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಿರುವ ಹೊರತಾಗಿಯೂ ಈ ಬಿಕ್ಕಟ್ಟು ಮುಂದುವರಿದಿದೆ” ಎಂದು ಪಾರ್ಸ್ವಂತ್ ಡೆವಲಪರ್ಸ್ ಲಿಮಿಟೆಡ್ ನ ವಕ್ತಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.