ತಮಿಳುನಾಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿಯ ಮೊಮ್ಮಗ ನಾನು, ಜೀವ ಬೆದರಿಕೆಗೆ ಚಿಂತಿಸುವುದಿಲ್ಲ: ಉದಯನಿಧಿ ಸ್ಟಾಲಿನ್
ಚೆನ್ನೈ: ಅಯೋಧ್ಯೆಯ ಸ್ವಾಮೀಜಿಯೊಬ್ಬರು ತಮಗೆ ಜೀವ ಬೆದರಿಕೆ ಒಡ್ಡಿರುವ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಕ್ರೀಡಾ ಸಚಿವ ಹಾಗೂ ನಟ ಉದಯನಿಧಿ ಸ್ಟಾಲಿನ್, ತಮಿಳುನಾಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿಯ ಮೊಮ್ಮಗ ನಾನು. ಈ ರೀತಿಯ ಬೆದರಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.
"ಸನಾತನ ಧರ್ಮ" ಕುರಿತು ಉದಯನಿಧಿ ನೀಡಿರುವ ಹೇಳಿಕೆಗೆ ಹಲವು ಹಿಂದೂ ಸ್ವಾಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ಅಯೋಧ್ಯೆಯ ತಪಸ್ವಿ ಧವನಿ ದೇವಸ್ಥಾನದ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯ ಜೀವ ಬೆದರಿಕೆ ಹಾಕಿದ್ದಾರೆ. ಕ್ರೀಡಾ ಸಚಿವ ಉದಯನಿಧಿ ತಲೆ ಕಡಿದು ತಂದುಕೊಟ್ಟವರಿಗೆ 10 ಕೋಟಿ ರೂ ಬಹುಮಾನವನ್ನು ನೀಡುತ್ತೇನೆ. ಯಾರೂ ಸ್ಟಾಲಿನ್ ನನ್ನು ಕೊಲ್ಲುವ ಧೈರ್ಯ ಮಾಡದಿದ್ದರೆ ನಾನೇ ಆತನನ್ನು ಪತ್ತೆ ಮಾಡಿ ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದರು
ಈ ಸ್ವಾಮೀಜಿ ಈ ಹಿಂದೆಯೂ ಕೂಡ ವಿವಾದಿತ ಹೇಳಿಕೆ ನೀಡಿದ್ದು,' ಪಠಾಣ್' ಚಿತ್ರಕ್ಕೆ ಸಂಬಂಧಿಸಿದಂತೆ ನಟ ಶಾರುಕ್ ಖಾನ್ ಅವರನ್ನು ಜೀವಂತ ಸುಡುತ್ತೇನೆ ಎಂದಿದ್ದರು.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ''ಉತ್ತರ ಪ್ರದೇಶದಲ್ಲಿ ಪರಮಹಂಸ ಆಚಾರ್ಯ ಅವರು ಸನಾತನ (ಧರ್ಮ) ಬಗ್ಗೆ ಮಾತನಾಡಿದ್ದಕ್ಕಾಗಿ ನನ್ನ ತಲೆ ಬೋಳಿಸಲು 10 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ನನ್ನ ತಲೆಯನ್ನು ಬಾಚಲು 10 ರೂಪಾಯಿ ಬಾಚಣಿಗೆ ಸಾಕು" ಎಂದು ಅವರು ಬೆದರಿಕೆಯನ್ನು ಲಘುವಾಗಿ ಪರಿಗಣಿಸಿದ್ದಾರೆ.
"ಇದು ನಮಗೆ ಹೊಸದಲ್ಲ. ಈ ಎಲ್ಲಾ ಬೆದರಿಕೆಗಳಿಗೆ ನಾವು ಹೆದರುವವರಲ್ಲ. ತಮಿಳಿಗಾಗಿ ರೈಲು ಹಳಿ ಮೇಲೆ ತಲೆ ಇಟ್ಟ ಕಲಾವಿದನ ಮೊಮ್ಮಗ ನಾನು" ಎಂದು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯ ನಿಧಿ ಹೇಳಿದ್ದಾರೆ.
ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು ಪೆರಿಯಾರ್ ಆರಂಭಿಸಿದ ವಿಚಾರವಾದಿ ಹಾಗೂ ಬ್ರಾಹ್ಮಣ ವಿರೋಧಿ ದ್ರಾವಿಡ ಚಳವಳಿಯ ನೇತೃತ್ವ ವಹಿಸಿದ್ದರು.