ನನ್ನ ಬಳಿ ಯಾವುದೇ ಪ್ರತಿಕ್ರಿಯೆ ಇಲ್ಲ: ತೆರಿಗೆ ಹೆಚ್ಚಳದ ಬಗೆಗಿನ ಪ್ರಶ್ನೆಗೆ ಉತ್ತರಿಸಲು ನಿರ್ಮಲಾ ಸೀತಾರಾಮನ್ ನಕಾರ

Update: 2024-05-17 06:22 GMT

ನಿರ್ಮಲಾ ಸೀತಾರಾಮನ್‌ | PC : X \ @nsitharamanoffc

ಮುಂಬೈ: ವಿವಿಧ ರೂಪಗಳಲ್ಲಿ ಭಾರತ ಸರ್ಕಾರ ವಿಧಿಸುವ ಹಲವು ಭಾರೀ ತೆರಿಗೆಗಳ ಕುರಿತಂತೆ ಮುಂಬೈ ಸ್ಟಾಕ್‌ ಬ್ರೋಕರ್‌ ಅವರು ಅಸಮಾಧಾನ ಸೂಚಿಸಿ ವ್ಯಕ್ತಪಡಿಸಿದ ಅನಿಸಿಕೆಗಳ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡದೇ ಇದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಟೀಕೆಗೊಳಗಾಗಿದ್ದಾರೆ.

ಈ ಘಟನೆ ಮುಂಬೈಯಲ್ಲಿ ಮೇ 14ರಂದು ನಡೆದ ವಿಕಸಿತ್‌ ಭಾರತ್‌ 2047 – ವಿಷನ್‌ ಫಾರ್‌ ಇಂಡಿಯನ್‌ ಫೈನಾನ್ಶಿಯಲ್‌ ಮಾರ್ಕೆಟ್ಸ್‌ ಇನ್ ಮುಂಬೈ ಎಂಬ ಕಾರ್ಯಕ್ರಮದ ವೇಳೆ ನಡೆಯಿತು.

ವಿತ್ತ ಸಚಿವೆ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಸ್ಟಾಕ್‌ ಮಾರ್ಕೆಟ್‌ ಬ್ರೋಕರ್‌ಗಳ ಮೇಲೆ ಹಾಗೂ ರಿಯಲ್‌ ಎಸ್ಟೇಟ್‌ ವ್ಯವಹಾರಗಳ ಮೇಲೆ ಭಾರತ ಸರ್ಕಾರ ವಿಧಿಸುತ್ತಿರುವ ಹಲವು ತೆರಿಗೆಗಳ ಬಗ್ಗೆ ಮುಂಬೈ ಸ್ಟಾಕ್‌ ಎಕ್ಸ್‌ಚೇಂಜ್‌ ಬ್ರೋಕರ್‌ ಒಬ್ಬರು ದೂರಿಕೊಂಡರು. ಸರ್ಕಾರ “ಸ್ಲೀಪಿಂಗ್‌ ಪಾರ್ಟ್‌ನರ್” ರೀತಿ ವರ್ತಿಸುತ್ತಿದೆ ಪ್ರತಿ ಹಂತದಲ್ಲೂ ತೆರಿಗೆ ಸಂಗ್ರಹಿಸಿ ಬ್ರೋಕರ್‌ಗಳಿಗಿಂತ ಹೆಚ್ಚು ಗಳಿಸುತ್ತಿದೆ ಎಂದು ಅವರು ಹೇಳಿದರು.

ಸ್ಟಾಕ್‌ ಬ್ರೋಕರ್‌ಗಳ ವ್ಯವಹಾರಗಳ ಮೇಲೆ ಜಿಎಸ್‌ಟಿ, ಐಜಿಎಸ್‌ಟಿ, ಸ್ಟ್ಯಾಂಪ್‌ ಡ್ಯೂಟಿ, ಸೆಕ್ಯುರಿಟೀಸ್‌ ಟ್ರಾನ್ಸಾಕ್ಷನ್‌ ಟ್ಯಾಕ್ಸ್‌, ಲಾಂಗ್‌ ಟರ್ಮ್‌ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಹೇರಿಕೆ ಕುರಿತು ಮಾತನಾಡಿದ ಅವರು ಈ ಹಲವು ತೆರಿಗೆಗಳು ಬ್ರೋಕರ್‌ಗಳು ಮತ್ತು ಹೂಡಿಕೆದಾರರ ಗಳಿಕೆಗಳನ್ನು ಬಾಧಿಸುತ್ತದೆ ಎಂದರು.

“ನಾನು ಎಲ್ಲಾ ಹೂಡಿಕೆ ಮಾಡುತ್ತೇನೆ, ಎಲ್ಲಾ ರಿಸ್ಕ್‌ ಎದುರಿಸುತ್ತೇನೆ ಮತ್ತು ಭಾರತ ಸರ್ಕಾರ ನನ್ನ ಸಂಪೂರ್ಣ ಲಾಭವನ್ನು ಸೆಳೆಯುತ್ತಿದೆ. ಇಷ್ಟೊಂದು ತೆರಿಗೆಗಳೊಂದಿಗೆ ಬ್ರೋಕರ್‌ ಒಬ್ಬರು ಹೇಗೆ ಕಾರ್ಯಾಚರಿಸಬಹುದು, ಇಲ್ಲಿ ಸರ್ಕಾರ ನನ್ನ ಸ್ಲೀಪಿಂಗ್‌ ಪಾರ್ಟ್‌ನರ್‌ ಮತ್ತು ನಾನು ಯಾವುದೇ ಆದಾಯವಿಲ್ಲದ ವರ್ಕಿಂಗ್‌ ಪಾರ್ಟ್‌ನರ್‌,” ಎಂದು ಅವರು ಹೇಳಿದರು.

ಸರ್ಕಾರ ನಗದು ನೀಡಿ ಹಣ ಖರೀದಿಸಲು ಅನುಮತಿಸದೇ ಇರುವುದರಿಂದ ಮನೆ ಖರೀದಿ ಎಷ್ಟು ಕಷ್ಟಕರ ಎಂದೂ ಅವರು ವಿವರಿಸಿದರು. ,”ಭಾರತ ಸರ್ಕಾರಕ್ಕೆ ಎಲ್ಲಾ ತೆರಿಗೆ ಪಾವತಿಸಿದ ನಂತರ ಉಳಿದ ಹಣ ನನ್ನ ಬ್ಯಾಂಕ್‌ ಬ್ಯಾಲೆನ್ಸ್‌ ಆಗಿದೆ. ಇದನ್ನು ಬಳಸಿ ನಾನು ಮನೆ ಖರೀದಿಸಬೇಕಾದರೆ ಸ್ಟ್ಯಾಂಪ್‌ ಡ್ಯೂಟಿ ಮತ್ತು ಜಿಎಸ್‌ಟಿ ಪಾವತಿಸಬೇಕಿದೆ,” ಎಂದು ಅವರು ಹೇಳಿದರು.

ಇದಕ್ಕೆ ಏನು ಉತ್ತರಿಸಬೇಕೆಂದು ತಿಳಿಯದ ಸಚಿವೆ “ನನಗೆ ಇದಕ್ಕೆ ಉತ್ತರವಿಲ್ಲ. ಇಲ್ಲಿ ಕುಳಿತುಕೊಂಡು ಸ್ಲೀಪಿಂಗ್‌ ಪಾರ್ಟ್‌ನರ್‌ಗೆ ಉತ್ತರಿಸಲಾಗದು,” ಎಂದು ಲಘು ಧಾಟಿಯಲ್ಲಿ ಹೇಳಿಬಿಟ್ಟರು.

ಸಚಿವೆಯ ಈ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News