ನಾನು ಚಿತ್ರ ನಿರ್ಮಾಣಕ್ಕಿಳಿದರೆ ದಿವಾಳಿಯಾಗುತ್ತೇನೆ: ನಟ ಸನ್ನಿ ಡಿಯೋಲ್
ಮುಂಬೈ: “ನಾನು ಚಿತ್ರ ನಿರ್ಮಾಣ ಮಾಡಲು ಹೋಗುವುದಿಲ್ಲ. ಹಾಗೇನಾದರೂ ಮಾಡಿದರೆ ದಿವಾಳಿಯಾಗುತ್ತೇನೆ” ಎಂದು ಖ್ಯಾತ ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಹೇಳಿದ್ದಾರೆ. ಬಿಸಿಸಿ ಏಶಿಯನ್ ನೆಟ್ ವರ್ಕ್ ರೇಡಿಯೊ ಸ್ಟೇಷನ್ ಗೆ ನೀಡಿರುವ ಸಂದರ್ಶನದಲ್ಲಿಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸನ್ನಿ ಡಿಯೋಲ್ ನಾಯಕತ್ವದ ‘ಗದರ್-2’ ಚಿತ್ರ ಗಲ್ಲಾಪೆಟ್ಟಿಗೆಯನ್ನು ದೋಚುತ್ತಿರುವಾಗಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. 2001ರಲ್ಲಿ ಬಿಡುಗಡೆಯಾಗಿದ್ದ ‘ಗದರ್: ಏಕ್ ಪ್ರೇಮ್ ಕಥಾ’ ಚಿತ್ರದ ಮುಂದುವರಿದ ಭಾಗವಾಗಿ, ಆಗಸ್ಟ್ 11ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಇಲ್ಲಿಯವರೆಗೆ ರೂ. 460.65 ಕೋಟಿ ರೂಪಾಯಿ ಗಳಿಸಿದೆ.
“ಹಲವಾರು ವರ್ಷಗಳ ಹಿಂದೆ ವಿತರಣೆಯು ಸಹಜವಾಗಿದ್ದುದರಿಂದ ನಿಯಂತ್ರಿಸಬಹುದಿತ್ತು. ಮಾತುಕತೆ ನಡೆಸಲು ಅಲ್ಲಿ ಜನರಿರುತ್ತಿದ್ದರು. ವಿತರಕರು ಹಾಗೂ ಪ್ರದರ್ಶಕರ ನಡುವೆ ಸಂಪರ್ಕವಿರುತ್ತಿತ್ತು. ಯಾವಾಗ ಚಿತ್ರ ಜಗತ್ತನ್ನು ಕಾರ್ಪೊರೇಟ್ ಸಂಸ್ಥೆಗಳು ಪ್ರವೇಶಿಸಿತೋ, ಆ ಬಳಿಕ ಏನೂ ಉಳಿದಿಲ್ಲ. ಪಾಲುಗಳು ಏರುಪೇರಾಗುತ್ತಿವೆ. ಒಬ್ಬ ವ್ಯಕ್ತಿಯಾಗಿ ಅಲ್ಲಿ ನಿಲ್ಲಲು ಕಷ್ಟವಾಗುತ್ತಿದೆ. ಜೊತೆಗೆ, ಚಿತ್ರಗಳ ಪ್ರಚಾರ ಅಭಿಯಾನಕ್ಕಾಗಿ ಅತ್ತಿಂದಿತ್ತ ಓಡಾಡುತ್ತಲೇ ಇರಬೇಕು. ಸಾಕಷ್ಟು ಸಂಖ್ಯೆಯ ಚಿತ್ರಮಂದಿರಗಳೂ ಸಿಗುವುದಿಲ್ಲ” ಎಂದು ಹೇಳಿದ್ದಾರೆ.
ಸನ್ನಿ ಡಿಯೋಲ್ ಅವರ ಹೇಳಿಕೆಯು ತನ್ನ 56 ಕೋಟಿ ರೂಪಾಯಿ ಬಾಕಿ ವಸೂಲಿ ಮಾಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾವು ಅವರ ಮುಂಬೈನ ಜುಹುವಿನಲ್ಲಿರುವ ಬಂಗಲೆಯನ್ನು ಹರಾಜಿಗಿಟ್ಟ ನಂತರ ಬಂದಿದೆ. ನಂತರ, ತನ್ನ ಹರಾಜು ನೋಟಿಸ್ ಅನ್ನು ಹಿಂಪಡೆದಿದ್ದ ಬ್ಯಾಂಕ್, ಸನ್ನಿ ಡಿಯೋಲ್ ಅವರು ಬಾಕಿಯನ್ನು ಪಾವತಿಸಲು ಮುಂದೆ ಬಂದಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಗೊಳಿಸಿತ್ತು.