ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ಅಧಿಕಾರ ಕೇಂದ್ರ ಸರಕಾರಕ್ಕಿಲ್ಲವಾದರೆ ಆ ಸರಕಾರ ಯಾಕೆ ಬೇಕು?: ಡಿಕೆಶಿ ಪ್ರಶ್ನೆ

Update: 2024-02-07 13:42 GMT

Photo: X/@ANI

ಹೊಸದಿಲ್ಲಿ: ‘ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಒಂದು ರಾಜ್ಯಕ್ಕೆ ಆಗಿರುವ ಅನ್ಯಾಯ, ತಾರತಮ್ಯವನ್ನು ಸರಿಪಡಿಸುವುದು ಕೇಂದ್ರ ಸರಕಾರದ ಕರ್ತವ್ಯ. ಈ ಅಧಿಕಾರ ಕೇಂದ್ರ ಸರಕಾರಕ್ಕೆ ಇಲ್ಲವಾದರೆ ಆ ಸರಕಾರ ಯಾಕಿರಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬುಧವಾರ ಕೇಂದ್ರ ಸರಕಾರದ ಅನುದಾನ ತಾರತಮ್ಯ ಖಂಡಿಸಿ ದಿಲ್ಲಿಯ ಜಂತರ್ ಮಂತರ್ ಮೈದಾನದಲ್ಲಿ ರಾಜ್ಯ ಸರಕಾರದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಅನುದಾನ ನೀಡುವ ಅಧಿಕಾರ ಹಣಕಾಸು ಆಯೋಗದ ಮುಂದೆ ಇದೆ. ಕೇಂದ್ರ ಸರಕಾರದ ಕೈಯಲ್ಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ನಿಮ್ಮ ಬಳಿ ಅಧಿಕಾರವೇ ಇಲ್ಲವಾದರೆ ಸರಕಾರ ಯಾಕಿರಬೇಕು? ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಸರಿಪಡಿಸುವುದು ಕೇಂದ್ರ ಸರಕಾರದ ಕೆಲಸವಲ್ಲವೇ? ಎಂದು ಕೇಳಿದರು.

ರಾಜ್ಯದ ಇತಿಹಾಸದಲ್ಲೆ ಇದೊಂದು ಐತಿಹಾಸಿಕ ದಿನ. ಮನುಷ್ಯ ಹುಟ್ಟಿದ ನಂತರ ಏನಾದರೂ ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು. ಅದರಂತೆ ಈ ಹೋರಾಟ ಮುಂದಿನ ಪೀಳಿಗೆಗೆ ಒಂದು ಸಾಕ್ಷಿಗುಡ್ಡೆಯಾಗಲಿದೆ. ಇಲ್ಲಿ ನಾನು ಹಾಗೂ ಮುಖ್ಯಮಂತ್ರಿ ಮಾತ್ರ ಬಂದು ಕೂತಿಲ್ಲ. ನಮ್ಮ ರಾಜ್ಯದ ಜನತೆ ಆರಿಸಿರುವ 138 ಶಾಸಕರು, ಪರಿಷತ್ ಸದಸ್ಯರು ಇಲ್ಲಿಗೆ ಬಂದು ರಾಜ್ಯದ ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

‘ನಮ್ಮ ಜನರ ಬೆವರು, ತೆರಿಗೆ, ನಮ್ಮ ಹಕ್ಕು. ಕರ್ನಾಟಕಕ್ಕೆ ನ್ಯಾಯ ಸಿಗಬೇಕು, ನಮ್ಮ ಪಾಲಿನ ಹಣ ನಮಗೆ ಸಿಗಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ. ಜನರ ಋಣ ತೀರಿಸಲು, ಬಡವರಿಗೆ ನ್ಯಾಯ ಒದಗಿಸಲು, ಬರದಲ್ಲಿ ತತ್ತರಿಸಿರುವ ಜನರ ಹಸಿವು ನೀಗಿಸಲು ನಾವಿಲ್ಲಿ ಸೇರಿದ್ದೇವೆ’ ಎಂದು ಶಿವಕುಮಾರ್ ತಿಳಿಸಿದರು.

ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕತೆ ಬಿಜೆಪಿ ಸ್ನೇಹಿತರಿಗಿಲ್ಲ: ಜನ ನಿಮ್ಮ 26 ಸಂಸದರನ್ನು ಆರಿಸಿದ್ದಾರೆ. ನೀವು ಒಂದು ದಿನ ರಾಜ್ಯದ ಪರವಾಗಿ ಹೋರಾಟ ಮಾಡಲಿಲ್ಲ. ರಾಜ್ಯದ ಹಿತದ ಬಗ್ಗೆ ಸರಕಾರದ ಮೇಲೆ ಒತ್ತಡ ಹಾಕಲಿಲ್ಲ. ಡಬಲ್ ಇಂಜಿನ್ ಸರಕಾರ ಇದ್ದರೂ ಇಂಜಿನ್ ಗಳು ಫೇಲ್ ಆದವು. ಮುಖ್ಯಮಂತ್ರಿ ನಿಮ್ಮನ್ನು ಕರೆದುಕೊಂಡು ಹೋದರೂ ನೀವು ಸರಕಾರದ ಮುಂದೆ ತುಟಿ ಬಿಚ್ಚಲಿಲ್ಲ. ಹೀಗಾಗಿ ಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡುವ ನೈತಿಕತೆ ನಿಮಗಿಲ್ಲ ಎಂದು ಅವರು ಟೀಕಿಸಿದರು.

ದೇಶದಲ್ಲಿ ಕೇಂದ್ರ ಸರಕಾರಕ್ಕೆ ಅತಿ ಹೆಚ್ಚು ಆದಾಯ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ಹೀಗಾಗಿ ನಾವು ನಮ್ಮ ಪಾಲನ್ನು ಕೇಳುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಬರ ಆವರಿಸಿದೆ. ನಮ್ಮ ಕೃಷಿ ಸಚಿವರು, ಕಂದಾಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಬರದ ವಿಚಾರವಾಗಿ ವರದಿ ನೀಡಿದ್ದಾರೆ. ಮುಖ್ಯಮಂತ್ರಿಗಳು, ಪ್ರಧಾನಿ ಹಾಗೂ ಗೃಹಮಂತ್ರಿಯನ್ನು ಭೇಟಿ ಮಾಡಿ ಪರಿಹಾರ ಕೋರಿದ್ದಾರೆ. ಆದರೂ ಇದುವರೆಗೂ ನಯಾ ಪೈಸೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್ ಅನುದಾನವೂ ಕೊಡಲಿಲ್ಲ ಯಾಕೆ?: ಕಳೆದ ವರ್ಷ ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇದ್ದಾಗ ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತರಾಮನ್ ಅನೇಕ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದರು. ಈ ಘೋಷಣೆಯಾಗಿ ಒಂದು ವರ್ಷವಾದರೂ ಇದುವರೆಗೂ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ ಎಂದು ಅವರು ದೂರಿದರು.

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ನಿರ್ಮಲಾ ಸೀತರಾಮನ್ ಕಳೆದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ 5300 ಕೋಟಿ ರೂ.ಗಳನ್ನು ನೀಡಲಿದೆ ಎಂದು ಘೋಷಿಸಿದ್ದರು. ಈವರೆಗೆ ಅದು ಜಾರಿಗೊಳಿಸಲಿಲ್ಲ? ಎಂದು ಶಿವಕುಮಾರ್ ಪ್ರಶ್ನಿಸಿದರು.



Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News