ಆಪ್ ಶಾಸಕನಿಗೆ ಸೇರಿದ ಸ್ಥಳಗಳಲ್ಲಿ ಅನುಷ್ಠಾನ ನಿರ್ದೇಶನಾಲಯ ಶೋಧ

Update: 2023-10-10 16:43 GMT

ಅಮಾನತುಲ್ಲಾ ಖಾನ್ | Photo: NDTV 

ಹೊಸದಿಲ್ಲಿ: ದಿಲ್ಲಿ ವಕ್ಫ್ ಮಂಡಳಿಯ ನೇಮಕಾತಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳು ಮತ್ತು ಹಣ ದುರುಪಯೋಗ ಆರೋಪಗಳಿಗೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯವು ಮಂಗಳವಾರ ಆಮ್ ಆದ್ಮಿ ಪಕ್ಷ (ಆಪ್)ದ ಶಾಸಕ ಅಮಾನತುಲ್ಲಾ ಖಾನ್ ಗೆ ಸೇರಿದೆಯೆನ್ನಲಾದ ಮೂರು ಸ್ಥಳಗಳಲ್ಲಿ ಶೋಧ ನಡೆಸಿದೆ.

ದಿಲ್ಲಿ ವಕ್ಫ್ ಮಂಡಳಿಯ ನೇಮಕಾತಿಗಳಲ್ಲಿ ನಡೆಯಿತೆನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ದಿಲ್ಲಿ ಭ್ರಷ್ಟಾಚಾರ ನಿಗ್ರಹ ಬ್ಯೂರೋ ಮತ್ತು ಸಿಬಿಐ ಆಪ್ ಶಾಸಕನ ವಿರುದ್ಧ ದಾಖಲಿಸಿರುವ ಪ್ರಕರಣಗಳ ಆಧಾರದಲ್ಲಿ ಅನುಷ್ಠಾನ ನಿರ್ದೇಶನಾಲಯವು ಈ ಶೋಧ ನಡೆಸಿದೆ.

ಮಂಡಳಿಯು ನಿಯಮಗಳನ್ನು ಅನುಸರಿಸದೆ ಗುತ್ತಿಗೆ ಆಧಾರದಲ್ಲಿ 33 ವ್ಯಕ್ತಿಗಳ ನೇಮಕಾತಿ ನಡೆಸಿದೆ ಎಂಬುದಾಗಿ ಹಫೀಝ್ ಇರ್ಶಾದ್ ಖುರೇಶಿ ಎಂಬವರು ದೂರು ಸಲ್ಲಿಸಿದ್ದರು. ಈ ಪೈಕಿ ಕೆಲವು ನೇಮಕಾತಿಗಳು ಖಾನ್ ಗೆ ಸಂಬಂಧಿಸಿದ್ದವು ಹಾಗೂ ನೇಮಕಾತಿಗೊಂಡ ಹೆಚ್ಚಿನವರು ಅವರ ಕ್ಷೇತ್ರ ಓಖ್ಲಕ್ಕೆ ಸೇರಿದವರಾಗಿದ್ದಾರೆ. 2022 ಸೆಪ್ಟಂಬರ್ 16ರಂದು, ಶಾಸಕನಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ದಿಲ್ಲಿ ಪೊಲೀಸರು ದಾಳಿ ನಡೆಸಿದ ಗಂಟೆಗಳ ಬಳಿಕ ಭ್ರಷ್ಟಾಚಾರ ನಿಗ್ರಹ ಘಟಕವು ಅವರನ್ನು ಬಂಧಿಸಿತ್ತು.

ಭ್ರಷ್ಟಾಚಾರ ನಿಗ್ರಹ ಘಟಕವು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ನಿಯಂತ್ರಣಕ್ಕೆ ಒಳಪಡುತ್ತದೆ. ಅದೇ ವರ್ಷದ ಸೆಪ್ಟಂಬರ್ 28ರಂದು ಅವರಿಗೆ ಜಾಮೀನು ಲಭಿಸಿತ್ತು. ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಆಪ್ ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ರನ್ನು ಅನುಷ್ಠಾನ ನಿರ್ದೇಶನಾಲಯವು ಬಂಧಿಸಿದ ಕೆಲವೇ ದಿನಗಳಲ್ಲಿ ಅಮಾನತುಲ್ಲಾ ಖಾನ್ ಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News