ಅಯೋಧ್ಯೆಯಲ್ಲಿ ಪರಿಸರ ಸೂಕ್ಷ್ಮ ಜಮೀನನ್ನು ಭಾರೀ ಲಾಭಕ್ಕೆ ಅದಾನಿಗೆ ಮಾರಿದ ಬಿಜೆಪಿ ನಾಯಕರಿಗೆ ಸಂಬಂಧಿಸಿದ ಸಂಸ್ಥೆ
2023ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಅಯೋಧ್ಯೆಯು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾಗ ಟೈಮ್ ಸಿಟಿ ಮಲ್ಟಿ ಸ್ಟೇಟ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ಎಂಬ ಸಂಸ್ಥೆಯು ಸರಯೂ ನದಿ ಸಮೀಪದ ಸಣ್ಣ ಜಮೀನೊಂದನ್ನು 1.13 ಕೋಟಿ ರೂ.ಗೆ ಖರೀದಿಸಿತ್ತು. ವಾರಗಳ ಬಳಿಕ ಅದು ಸದ್ರಿ ಜಮೀನನ್ನು ಅದಾನಿ ಗ್ರೂಪ್‌ಗೆ ಮೂರು ಪಟ್ಟಿಗೂ ಅಧಿಕ ಬೆಲೆಯಲ್ಲಿ, 3.57 ಕೋಟಿ ರೂ.ಗೆ ಮಾರಾಟ ಮಾಡಿದೆ.
ಅಂದ ಹಾಗೆ ಟೈಮ್ ಸಿಟಿ ಸಾಮಾನ್ಯ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲ. ಅದು ಚಂದ್ರಪ್ರಕಾಶ ಶುಕ್ಲಾ ಸ್ಥಾಪಿಸಿದ್ದ ಟೈಮ್ ಸಿಟಿ ಗ್ರೂಪ್‌ನ ಭಾಗವಾಗಿದೆ. ಸಹಾರಾ ಗ್ರೂಪ್‌ನ ಮಾಜಿ ಚಾರ್ಟರ್ಡ್ ಅಕೌಂಟಂಟ್ ಶುಕ್ಲಾ ಬಿಜೆಪಿಗೆ ಸೇರ್ಪಡೆಗೊಂಡು 2017-2022ರ ಅವಧಿಯಲ್ಲಿ ಕಪ್ತಾನಗಂಜ್ ಶಾಸಕರಾಗಿದ್ದರು. ಟೈಮ್ ಸಿಟಿ ಗ್ರೂಪ್‌ನ್ನು ಈಗ ಶುಕ್ಲಾ ಅವರ ಮಾಜಿ ಉದ್ಯಮ ಸಹವರ್ತಿ ಪಂಕಜ್ ಪಾಠಕ್ ನಡೆಸುತ್ತಿದ್ದಾರೆ. ಬಿಜೆಪಿ ಸದಸ್ಯರಾಗಿರುವ ಪಾಠಕ್ ರಾಜ್ಯ ಬಿಜೆಪಿ ಘಟಕದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ.
ವಂಚನೆ ಆರೋಪಗಳು ಮತ್ತು ಲಕ್ನೋ ಪೋಲಿಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ಎದುರಿಸುತ್ತಿರುವ ಟೈಮ್ ಸಿಟಿ ಗ್ರೂಪ್ ಗಳಿಸಿರುವ ಲಾಭಗಳು ರಾಮ ಮಂದಿರವು ಅಯೋಧ್ಯೆಯನ್ನು ಹೇಗೆ ಪರಿವರ್ತಿಸುತ್ತಿದೆ ಎನ್ನುವುದರ ಕುರಿತು ವರದಿಗಳಲ್ಲಿ ಸಾಮಾನ್ಯವಾಗಿ ಕಡೆಗಣಿಸಲಾದ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಜೊತೆಗೆ ಭೂಮಿಗೆ ಬೇಡಿಕೆ ಹೆಚ್ಚತೊಡಗಿದ್ದು, ಇದು ಅದಾನಿ ಗ್ರೂಪ್ ಮತ್ತು ಲೋಧಾ ಗ್ರೂಪ್‌ನಂತಹ ದೊಡ್ಡ ಉದ್ಯಮ ಸಂಸ್ಥೆಗಳನ್ನೂ ಸೆಳೆದಿದೆ. ಈ ಬೇಡಿಕೆಯಿಂದಾಗಿ ಸ್ಥಳೀಯ ಫಲಾನುಭವಿಗಳೂ ಹುಟ್ಟಿಕೊಂಡಿದ್ದು,ಹೆಚ್ಚಾಗಿ ಆಡಳಿತ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ.
ಇಲ್ಲಿ ನಷ್ಟಕ್ಕೊಳಗಾದವರು ತಮ್ಮ ಭೂಮಿಯನ್ನು ಅಗ್ಗದ ದರಕ್ಕೆ ಮಾರಾಟ ಮಾಡಿದ ರೈತರು ಮತ್ತು ಸ್ಥಳೀಯ ಪರಿಸರ. ಅದಾನಿ ಗ್ರೂಪ್‌ಗೆ ಮಾರಾಟ ಮಾಡಲಾಗಿರುವ ಮಾಜ್ಹಾ ಜಮ್ತಾರಾದಲ್ಲಿಯ ಜಮೀನು ಸಾರಸ್ ಕೊಕ್ಕರೆ,ಬೂದು ಬಕಪಕ್ಷಿಗಳು ಮತ್ತು ಭಾರತೀಯ ನರಿಗಳ ಆವಾಸ ಸ್ಥಾನವಾಗಿರುವ ಸರಯೂ ನದಿ ಸಮೀಪದ ಪರಿಸರ ಸೂಕ್ಷ್ಮ ಜೌಗು ಪ್ರದೇಶದ ಭಾಗವಾಗಿದೆ. ಡಿಸೆಂಬರ್ 2022ರಿಂದ ಸರಕಾರವು ಈ ಪ್ರದೇಶದಲ್ಲಿ ಯಾವುದೇ ಹೊಸ ನಿರ್ಮಾಣವನ್ನು ನಿಷೇಧಿಸಿದೆ.
scroll.in ನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅದಾನಿ ಗ್ರೂಪ್‌ನ ವಕ್ತಾರರು, ವಹಿವಾಟು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಮತ್ತು ಎಲ್ಲ ಕಾನೂನುಗಳು ಹಾಗೂ ನಿಯಮಗಳಿಗೆ ಅನುಗುಣವಾಗಿ ನಡೆಸಲಾಗಿದೆ. ಕಂಪನಿಯು ಪ್ರಚಲಿತ ದರಗಳಲ್ಲಿ ಜಮೀನನ್ನು ಖರೀದಿಸಿದೆ ಎಂದು ತಿಳಿಸಿದರು.
ಫೈಝಾಬಾದ್, ಅಯೋಧ್ಯೆ ಮತ್ತು ಸರಯೂ ನದಿ ನಡುವಿನ ವಿಶಾಲವಾದ, ಜನವಸತಿಯಿಲ್ಲದ ಪ್ರದೇಶವಾಗಿರುವ ಮಾಜ್ಹಾ ಜಮ್ತಾರಾ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ ಸ್ಥಳದಿಂದ ಸುಮಾರು ಐದು ಕಿ.ಮೀ.ಅಂತರದಲ್ಲಿದೆ. ಎರಡು ದಶಕಗಳ ಹಿಂದೆ ಇಲ್ಲಿಯ ಹೆಚ್ಚಿನ ಪ್ರದೇಶವು ನದಿಪಾತ್ರದ ಭಾಗವಾಗಿತ್ತು. 1990ರ ದಶಕದಲ್ಲಿ ಸರಯೂ ನದಿಯು ಹಿಂದೆ ಸರಿದು ತನ್ನ ಮಾರ್ಗವನ್ನು ಬದಲಿಸಿದಾಗ ಹೆಚ್ಚಿನ ಭಾಗದಲ್ಲಿ ಕೃಷಿ ಆರಂಭಗೊಂಡಿತ್ತು. ಹೆಚ್ಚಿನ ರೈತರು ಯಾದವ ಸಮುದಾಯಕ್ಕೆ ಸೇರಿದವರಾಗಿದ್ದರು.
2023 ಅಕ್ಟೋಬರ್‌ನಲ್ಲಿ ಟೈಮ್ ಸಿಟಿ ಒಂದು ಹೆಕ್ಟೇರ್ ಜಮೀನನ್ನು ಖರೀದಿಸಿತ್ತು. ಈ ಜಮೀನು ಘನಸೀರಾ ಯಾದವ ಮತ್ತು ಕಬೂತ್ರಾದೇವಿ ಯಾದವ ಅವರ ಕುಟುಂಬಗಳಿಗೆ ಸೇರಿದ್ದಾಗಿತ್ತು.
‘2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ಪ್ರಕರಣದಲ್ಲಿ ತೀರ್ಪನ್ನು ಪ್ರಕಟಿಸಿದ ಬಳಿಕ ಈ ಪ್ರದೇಶದಲ್ಲಿ ಸರಕಾರವು ಭೂಸ್ವಾಧೀನ ಪಡಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ನಮಗೆ ಸೂಕ್ತ ಪರಿಹಾರ ಸಿಗುತ್ತದೆ ಎನ್ನುವ ಬಗ್ಗೆ ನಮಗೆ ಖಾತರಿ ಇರಲಿಲ್ಲ. ಹೀಗಾಗಿ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಖಾಸಗಿಯವರಿಗೆ ಜಮೀನು ಮಾರಲು ನಾವು ನಿರ್ಧರಿಸಿದ್ದೆವು. ಏನೂ ಹಣ ಸಿಗದಿರುವುದಕ್ಕಿಂತ ಸ್ವಲ್ಪವಾದರೂ ಹಣ ಸಿಗುವುದು ಒಳ್ಳೆಯದು’ ಎಂದು ಫೈಝಾಬಾದ್‌ನಲ್ಲಿ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿರುವ ಕಬೂತ್ರಾ ದೇವಿಯ ಮೊಮ್ಮಗ ಅಜಯ್ ಯಾದವ್ ಹೇಳಿದರು.
ಫೆಬ್ರವರಿ 2021ರಲ್ಲಿ ಯಾದವಗಳು ಪಿತ್ರಾರ್ಜಿತವಾಗಿ ಬಂದಿದ್ದ 0.56 ಹೆಕ್ಟೇರ್ ಜಮೀನನ್ನು ಕಾನ್ಪುರ ನಿವಾಸಿ ಸುಧಾ ದೀಕ್ಷಿತ್‌ಗೆ 33.53 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಇದು ಆಗಿನ ಸರ್ಕಲ್ ರೇಟ್ 77.46 ಲಕ್ಷಕ್ಕಿಂತ ಗಣನೀಯವಾಗಿ ಕಡಿಮೆಯಾಗಿತ್ತು. ಸರ್ಕಲ್ ರೇಟ್ ಜಿಲ್ಲಾಡಳಿತವು ನಿಗದಿ ಪಡಿಸುವ ಜಮೀನಿನ ಕನಿಷ್ಠ ಬೆಲೆಯಾಗಿದೆ.
ಎರಡು ವರ್ಷಗಳ ಬಳಿಕ 2023 ಅಕ್ಟೋಬರ್‌ನಲ್ಲಿ ದೀಕ್ಷಿತ್ ಜಮೀನನ್ನು 40 ಲಕ್ಷ ರೂ.ಗೆ ಟೈಮ್ ಸಿಟಿಗೆ ಮಾರಿದ್ದರು. 2023,ನವಂಬರ್‌ನಲ್ಲಿ ಯಾದವಗಳು 0.44 ಹೆಕ್ಟೇರ್‌ನ ಇನ್ನೊಂದು ಜಮೀನನ್ನು 33 ಲ.ರೂ.ಗೆ ನೇರವಾಗಿ ಟೈಮ್ ಸಿಟಿಗೆ ಮಾರಾಟ ಮಾಡಿದ್ದರು. ಈ ಮೂರೂ ವಹಿವಾಟುಗಳಲ್ಲಿ ಸಾಕ್ಷಿಗಳು ಸ್ಥಳೀಯ ಬಿಜೆಪಿ ರಾಜಕಾರಣಿಗಳೊಂದಿಗೆ ನಂಟು ಹೊಂದಿದವರೇ ಆಗಿದ್ದರು.
ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಲಭ್ಯವಿರುವ ದಾಖಲೆಗಳಂತೆ ಟೈಮ್ ಸಿಟಿ ನಾಲ್ಕು ವಹಿವಾಟುಗಳಲ್ಲಿ ಒಟ್ಟು 1.13 ಕೋಟಿ ರೂ.ಮೌಲ್ಯದ ಜಮೀನು ಖರೀದಿಸಿತ್ತು. ಅದು ಬಳಿಕ ಈ ಜಮೀನನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡುವ ಮೂಲಕ 2.44 ಕೋಟಿ ರೂ.ಗಳ ಲಾಭವನ್ನು ಗಳಿಸಿದೆ.
ಅತ್ತ ಫೈಝಾಬಾದ್‌ನಲ್ಲಿರುವ ಅಜಯ ಯಾದವಗೆ ಟೈಮ್ ಸಿಟಿ ತನ್ನ ಆಸ್ತಿಯನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಿದೆ ಮತ್ತು ಗಣನೀಯ ಲಾಭವನ್ನು ಗಳಿಸಿದೆ ಎನ್ನುವುದು ಗೊತ್ತಿರಲಿಲ್ಲ.‘ಟೈಮ್ ಸಿಟಿ ಅಧಿಕಾರಿಗಳು ಜಮೀನನ್ನು ತಾವೇ ಇಟ್ಟುಕೊಳ್ಳುತ್ತಿವೆ ಎಂದು ನನಗೆ ತಿಳಿಸಿದ್ದರು. ಅವರು ಈಗ ನಂಬಿಕೆ ದ್ರೋಹ ಮಾಡಿರುವಂತೆ ನನಗೆ ಭಾಸವಾಗುತ್ತಿದೆ’ ಎಂದು ಸ್ಕ್ರೋಲ್ ಜೊತೆ ಮಾತನಾಡಿದ ಯಾದವ ಹೇಳಿದರು.
ಸರಕಾರಿ ಭೂಮಿ?
ವಹಿವಾಟಿನ ಮೌಲ್ಯವಷ್ಟೇ ಅಲ್ಲ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿಯವರಿಗೆ ಜಮೀನು ಮಾರಾಟದ ಕಾನೂನು ಬದ್ಧತೆಯ ಕುರಿತೂ ಈಗ ಪ್ರಶ್ನೆಗಳು ಉದ್ಭವಿಸಿವೆ.
2019ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ವು ರಚಿಸಿದ್ದ ಸಮಿತಿಯು ಮಾಜ್ಹಾ ಜಮ್ತಾರಾ ಸುತ್ತಲಿನ ಪ್ರದೇಶವು ರಾಜ್ಯ ಸರಕಾರಕ್ಕೆ ಸೇರಿದ ಜೌಗು ಭೂಮಿಯಾಗಿದೆ ಎಂದು ಹೇಳಿತ್ತು.
ಅಯೋಧ್ಯೆಯ ಅರ್ಚಕರೋರ್ವರು ಮೇ 2019ರಲ್ಲಿ ಮೊದಲ ಬಾರಿಗೆ ಸರಯೂ ನದಿಯಲ್ಲಿ ಜಲಮಾಲಿನ್ಯದ ಕುರಿತು ಎನ್‌ಜಿಟಿ ಸಮಿತಿಗೆ ಎಚ್ಚರಿಕೆ ನೀಡಿದ್ದರು. ಜಗದ್ಗುರು ರಾಮಾನುಜ ಆಚಾರ್ಯರು ಈ ಬಗ್ಗೆ ಉತ್ತರ ಪ್ರದೇಶದ ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ ಅವಸ್ಥಿಯವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿಯು ಭೂದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ನದಿಯು ಒಮ್ಮೆ ಹರಿಯುತ್ತಿದ್ದ ಭೂಮಿಯ ಸ್ಥಿತಿಯನ್ನು ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.
ಜಿಲ್ಲಾಡಳಿತವು ಸಲ್ಲಿಸಿದ್ದ ವರದಿಗಳ ಆಧಾರದಲ್ಲಿ ಸಮಿತಿಯು,ಈವರೆಗೆ ಕಂದಾಯ ದಾಖಲೆಯಲ್ಲಿರುವ ಸಂಪೂರ್ಣ ಭೂಮಿಯು ನೀರಿನಲ್ಲಿ ಮುಳುಗಿದ್ದ ಜಮೀನು ಎಂದು ದಾಖಲಾಗಿದೆ ಎಂಬ ನಿರ್ಧಾರಕ್ಕೆ ಬಂದಿತ್ತು.
ಸಮಿತಿಯ ಮಧ್ಯಂತರ ವರದಿಯಲ್ಲಿ ಲಗತ್ತಿಸಲಾಗಿರುವ ಭೂದಾಖಲೆಗಳು ಅದಾನಿ ಗ್ರೂಪ್ ಖರೀದಿಸಿರುವ ಜಮೀನಿನ ಹೆಚ್ಚಿನ ಭಾಗ ನೀರಿನಲ್ಲಿ ಮುಳುಗಿದ್ದ ಪ್ರದೇಶದಲ್ಲಿದೆ ಎನ್ನುವುದನ್ನು ತೋರಿಸುತ್ತಿವೆ.
ಸರಯೂ ನದಿ ಬಳಿಯ ಜೌಗುಭೂಮಿಯನ್ನು ಭೂ ಮಾಫಿಯಾ ಬಮವಂತದಿಂದ ಆಕ್ರಮಿಸಿಕೊಂಡಿದೆ ಮತ್ತು ನಂತರ ಕಂದಾಯ ದಾಖಲೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಕೆಲವು ಕಡೆಗಳಲ್ಲಿ ನಿರ್ಮಾಣಗಳನ್ನು ಮಾಡಲಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ಟೈಮ್ ಸಿಟಿಯ ಕಚೇರಿಯೂ ಅಕ್ರಮ ನಿರ್ಮಾಣವಾಗಿದೆ ಎಂದು ಅದು ಬೆಟ್ಟು ಮಾಡಿದೆ.
2022, ಜುಲೈನಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ನಡೆಸಿದ್ದ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಟೈಮ್ ಸಿಟಿ ಕಚೇರಿಯ ಗಡಿ ಗೋಡೆಯನ್ನು ನೆಲಸಮಗೊಳಿಸಿದ್ದರು. ಒಂದು ತಿಂಗಳ ಬಳಿಕ ಪಾಠಕ್ ಸೇರಿದಂತೆ 40 ಜನರನ್ನು ಅತಿಕ್ರಮಣಕಾರರು ಎಂದು ಪ್ರಾಧಿಕಾರವು ಘೋಷಿಸಿತ್ತು.
ತಾನು ಖರೀದಿಸಿರುವ ಜಮೀನು ಕಾನೂನು ತೊಡಕುಗಳಿಂದ ಮುಕ್ತವಾಗಿದೆ. ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದರೆ ಎಲ್ಲ ನಿಯಮಗಳನ್ನು ಪಾಲಿಸುವುದಾಗಿ ಅದಾನಿ ಗ್ರೂಪ್ ಹೇಳಿಕೊಂಡಿದೆ.
ಮ್ಹಾಜಾ ಜಮ್ತಾರಾ ಜೌಗು ಪ್ರದೇಶವಾಗಿರುವುದರಿಂದ ಅಲ್ಲಿ ಯಾವುದೇ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ. ತಾನು ಖರೀದಿಸಿರುವ ಜಮೀನಿನಲ್ಲಿ ಅದಾನಿ ಗ್ರೂಪ್ ಯಾವ ಚಟುವಟಿಕೆಯನ್ನು ನಡೆಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.