ಮಹಾರಾಷ್ಟ್ರ: ಲೋಕಸಭಾ ಚುನಾವಣಾ ಸ್ಥಾನ ಹಂಚಿಕೆ ಸೂತ್ರಕ್ಕೆ ‘ಇಂಡಿಯಾ’ ಪಕ್ಷಗಳ ಒಪ್ಪಿಗೆ

Update: 2024-01-12 05:57 GMT

ಫೈಲ್ ಫೋಟೊ | Image Source : PTI

ಮುಂಬೈ: ಪ್ರತಿಪಕ್ಷ ಮೈತ್ರಿ ಒಕ್ಕೂಟ ಭಾರತ ರಾಷ್ಟ್ರೀಯ ಅಭಿವೃದ್ಧಿ ಸಮ್ಮಿಳಿತ ಒಕ್ಕೂಟ (ಇಂಡಿಯ)ಕ್ಕೆ ಸೇರಿದ ಮೂರು ರಾಜಕೀಯ ಪಕ್ಷಗಳು, ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಸ್ಥಾನ ಹೊಂದಾಣಿಕೆ ಸೂತ್ರಕ್ಕೆ ಮಂಗಳವಾರ ಒಪ್ಪಿಗೆ ನೀಡಿವೆ.

‘ಇಂಡಿಯ’ ಒಕ್ಕೂಟವು 28 ಪ್ರತಿಪಕ್ಷಗಳ ಮೈತ್ರಿಕೂಟವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿ ಎ)ವನ್ನು ಸಂಘಟಿತವಾಗಿ ಎದುರಿಸುವ ಯೋಜನೆಯನ್ನು ಹೊಂದಿವೆ.

ಮಂಗಳವಾರ, ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕರೆ ಬಣ) ನಾಯಕರು ದಿಲ್ಲಿಯಲ್ಲಿ ಸಭೆ ಸೇರಿ ಸ್ಥಾನ-ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿದರು. ಈ ಮೂರು ಪಕ್ಷಗಳು ರಾಜ್ಯ ಮಟ್ಟದಲ್ಲಿ ‘ಮಹಾ ವಿಕಾಸ ಅಘಾಡಿ’ ಎಂಬ ಹೆಸರಿನಲ್ಲಿ ಮೈತ್ರಿಕೂಟವನ್ನು ಹೊಂದಿವೆ.

‘‘ನಾವು ಚುನಾವಣೆಯನ್ನು ಜೊತೆಯಾಗಿ ಎದುರಿಸುತ್ತೇವೆ ಎಂಬ ಭರವಸೆಯನ್ನು ನಾನು ಎಲ್ಲರಿಗೂ ನೀಡಬಯಸುತ್ತೇನೆ’’ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಸ್ಥಾನ ಹಂಚಿಕೆ ವಿಷಯದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪ್ರತಿಯೊಂದು ಸ್ಥಾನದ ಬಗ್ಗೆ ನಾವು ವಿವರವಾಗಿ ಚರ್ಚೆ ನಡೆಸಿದ್ದೇವೆ’’ ಎಂದರು.

ಆದರೆ, ಯಾವ ಪಕ್ಷಗಳು ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತವೆ ಎನ್ನುವ ವಿವರಗಳನ್ನು ಮೈತ್ರಿಕೂಟದ ನಾಯಕರು ನೀಡಿಲ್ಲ. ಆದರೆ, ಕಾಂಗ್ರೆಸ್ ಮತ್ತು ಶಿವಸೇನೆ ಠಾಕ್ರೆ ಬಣವು ತಲಾ 18ರಿಂದ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತವೆ ಮತ್ತು ಪವಾರ್ ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು 8ರಿಂದ 10 ಸ್ಥಾನಗಳನ್ನು ಪಡೆಯಬಹುದು ಎಂಬುದಾಗಿ ‘ದ ಹಿಂದೂ’ ವರದಿ ಮಾಡಿದೆ.

‘‘ಯವುದೇ ಸಮಸ್ಯೆಯಾಗಿಲ್ಲ’’ ಎಂದು ಹೇಳಿದ ಕಾಂಗ್ರೆಸ್ ನ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೇನಿತಾಲ, ಸ್ಥಾನ ಹಂಚಿಕೆಯನ್ನು ಪ್ರಕಟಿಸುವ ಮೊದಲ ರಾಜ್ಯ ಮಹಾರಾಷ್ಟ್ರ ಆಗಿರುತ್ತದೆ’’ ಎಂದು ಹೇಳಿದರು.

ಪ್ರಕಾಶ್ ಅಂಬೇಡ್ಕರ್ ರ ವಂಚಿತ್ ಬಹುಜನ ಅಘಾಡಿ ಪಕ್ಷವನ್ನೂ ಮಹಾ ವಿಕಾಸ ಅಘಾಡಿಯಲ್ಲಿ ಸೇರ್ಪಡೆಗೊಳಿಸಲು ಪಕ್ಷಗಳು ನಿರ್ಧರಿಸಿವೆ ಎಂಬುದಾಗಿಯೂ ರಾವುತ್ ಪ್ರಕಟಿಸಿದರು.

ಚುನಾವಣೆಯನ್ನು ಜೊತೆಯಾಗಿ ಎದುರಿಸುವುದಿಲ್ಲ ಎಂದ ತೃಣಮೂಲ, ಸಿಪಿಎಮ್

ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಯನ್ನು ತಾವು ಜೊತೆಯಾಗಿ ಎದುರಿಸುವುದಿಲ್ಲ ಎಂದು ‘ಇಂಡಿಯಾ’ ಮೈತ್ರಿಕೂಟದ ಘಟಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಮ್)ಗಳು ಘೋಷಿಸಿವೆ.

ನನ್ನ ಪಕ್ಷವು ಯಾವತ್ತೂ ಸಿಪಿಎಮ್ ವಿರುದ್ಧ ಹೋರಾಡುತ್ತಾ ಬಂದಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಹಾಗೂ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದರು.

‘‘ಭಯೋತಾದಕ ಪಕ್ಷ ಸಿಪಿಎಮ್ ಬಿಜೆಪಿಗೆ ಸಹಾಯ ಮಾಡುತ್ತಿದೆ’’ ಎಂದು ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ ಹೇಳಿದರು. ‘‘34 ವರ್ಷಗಳ ಕಾಲ ಅದು ಜನರ ಮನಸ್ಸುಗಳೊಂದಿಗೆ ಆಟವಾಡುತ್ತಾ ಬಂದಿದೆ. ಅದರೊಂದಿಗೆ ನನಗೆ ಯಾವ ಹೊಂದಾಣಿಕೆಯೂ ಇಲ್ಲ. ಇಂದು ಅವರು ಕ್ಯಾಮರದ ಎದುರು ಕೂತು ಮಾತನಾಡುತ್ತಿದ್ದಾರೆ. 34 ವರ್ಷಗಳ ಕಾಲ ಅವರು ಏನು ಮಾಡುತ್ತಿದ್ದರು?’’ ಎಂದು ಅವರು ಹೇಳಿದರು.

ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನ್ನ ನಾಯಕರನ್ನು ರಕ್ಷಿಸಲು ತೃಣಮೂಲ ಕಾಂಗ್ರೆಸ್ ರಾಜಕೀಯ ಹೊಂದಾಣಿಕೆಯೊಂದನ್ನು ಮಾಡಿಕೊಂಡಿದೆ ಎಂಬುದಾಗಿ ಸಿಪಿಎಂ ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಲೀಮ್ ಆರೋಪಿಸಿದ ಬಳಿಕ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮೊದಲು, ತೃಣಮೂಲ ಕಾಂಗ್ರೆಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ರಾಜ್ಯ ನಾಯಕತ್ವವೂ ಹಿಂಜರಿದಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News