ಭಾರತದ ಆರ್ಥಿಕತೆಯು ಪ್ರಗತಿಯಾಗುತ್ತಿದೆ, ಆದರೆ..: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದ ರಾಹುಲ್ ಗಾಂಧಿ
ಹೊಸದಿಲ್ಲಿ: “ಭಾರತದ ಆರ್ಥಿಕತೆಯು ಪ್ರಗತಿಯಾಗುತ್ತಿದ್ದರೂ, ಸಂಪತ್ತು ಕೆಲವೇ ಕೈಗಳಲ್ಲಿ ಕೇಂದ್ರೀಕೃತವಾಗುತ್ತಿದೆ ಹಾಗೂ ನಿರುದ್ಯೋಗದ ಸವಾಲು ಮುಂದುವರಿದಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.
ಡಿಸೆಂಬರ್ 15ರಂದು ವಿದ್ಯಾರ್ಥಿಗಳೊಂದಿಗೆ ನಡೆದಿದ್ದ ಸಂವಾದ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಜನರೊಂದಿಗೆ ಸಂಪರ್ಕ ಹೊಂದುವುದರೊಂದಿಗೆ, ಅವರು ಏನು ಹೇಳುತ್ತಿದ್ದಾರೆ ಎಂದು ಆಳವಾಗಿ ಕೇಳಿಸಿಕೊಳ್ಳುವುದರೊಂದಿಗೆ ಹಾಗೂ ನಿಮಗೆ ನೀವೇ ವಿಧೇಯರಾಗಿ ಇರುವುದರೊಂದಿಗೆ ನಿಜವಾದ ಅಧಿಕಾರ ಬರುತ್ತದೆ ಎಂಬುದು ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಕಿವಿಮಾತಾಗಿದೆ” ಎಂದು ಹೇಳಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿಗಳೊಂದಿಗೆ ನಡೆದಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರನ್ನು ಕಳೆದ 10 ವರ್ಷಗಳಲ್ಲಿನ ಭಾರತದ ಆರ್ಥಿಕತೆಯ ಪ್ರಗತಿ ಕುರಿತು ಪ್ರಶ್ನಿಸಲಾಗಿತ್ತು.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, “ನೀವು ಆರ್ಥಿಕ ಪ್ರಗತಿಯ ಕುರಿತು ಮಾತನಾಡುವಾಗ, ಆ ಆರ್ಥಿಕ ಪ್ರಗತಿಯು ಯಾರ ಹಿತಾಸಕ್ತಿಯ ಪರವಾಗಿದೆ ಎಂಬ ಪ್ರಶ‍್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ” ಎಂದು ಉತ್ತರಿಸಿದ್ದರು.
“ಪ್ರಗತಿಯು ಯಾವ ಬಗೆಯಲ್ಲಿದೆ ಹಾಗೂ ಅದರಿಂದ ಯಾರು ಲಾಭ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಬೇಕಿದೆ. ಭಾರತದ ಪ್ರಗತಿಯ ಅಂಕಿಸಂಖ್ಯೆಯ ಪಕ್ಕದಲ್ಲೇ ನಿಮ್ಮ ಬಳಿ ಭಾರತದಲ್ಲಿನ ನಿರುದ್ಯೋಗ ಪ್ರಮಾಣದ ಅಂಕಿಸಂಖ್ಯೆಯೂ ಇದೆ. ಹೀಗಾಗಿ ಭಾರತವು ಪ್ರಗತಿಯಾಗುತ್ತಿದೆ, ಆದರೆ, ಅದು ಪ್ರಗತಿಯಾಗುತ್ತಿರುವ ರೀತಿ ನೋಡಿದರೆ, ಭಾರಿ ಪ್ರಮಾಣದ ಸಂಪತ್ತು ಕೆಲವೇ ವ್ಯಕ್ತಿಗಳ ಬಳಿ ಕೇಂದ್ರೀಕೃತವಾಗುತ್ತಿದೆ” ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
“ನಾವು ಸಾಲದ ಮಾದರಿಯ ಮೇಲೆ ಕಾರ್ಯಾಚರಿಸುತ್ತಿದ್ದೇವೆ ಹಾಗೂ ನಾವು ಯಾವುದೇ ಉತ್ಪಾದನೆಯನ್ನು ಮಾಡುತ್ತಿಲ್ಲ. ನಮ್ಮ ಬಳಿ ಎರಡು ಮೂರು ಉದ್ಯಮಗಳು ಮಾತ್ರ ಇದ್ದು, ಅವೇ ಬಹುತೇಕ ಸಂಪೂರ್ಣ ಉದ್ಯಮಗಳಾಗಿವೆ” ಎಂದೂ ಹೇಳಿದ್ದಾರೆ.
ನಾವು ಹೇಗೆ ಬೃಹತ್ ಸಂಖ್ಯೆಯ ಜನರಿಗೆ ಉದ್ಯೋಗಗಳನ್ನು ಒದಗಿಸುವ ಉತ್ಪಾದನಾ ಆಧಾರಿತ ಆರ್ಥಿಕತೆಯನ್ನು ಸೃಷ್ಟಿಸುತ್ತೇವೆ ಎಂಬುದು ಭಾರತದ ಮುಂದಿರುವ ಸವಾಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.