ಮಾಹಿತಿ ಸೋರಿಕೆ ಆರೋಪ: ಮಾವೋವಾದಿಗಳಿಂದ ಮತ್ತೊಬ್ಬ ಮಹಿಳೆಯ ಹತ್ಯೆ
ರಾಯಪುರ: ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಶಂಕೆಯಿಂದ ಮಾವೋವಾದಿಗಳು ರವಿವಾರ ಚತ್ತೀಸ್ಗಢದ ಬಿಜಾಪುರದಲ್ಲಿ ಮತ್ತೊಬ್ಬ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ. ಇದು ಎರಡು ದಿನದಲ್ಲಿ ನಡೆದ ಇಂತಹ ಎರಡನೇ ಹತ್ಯೆಯಾಗಿದೆ.
ಲೊಡೇಡ್ ಗ್ರಾಮದ ಯಲಮ್ ಸುಕ್ರಾ (40) ಎಂಬ ಮಹಿಳೆಯನ್ನು ಹತ್ಯೆ ಮಾಡಲಾಗಿದ್ದು, ಶನಿವಾರ ಮಹಿಳೆಯ ಹತ್ಯೆ ನಡೆದ ಗ್ರಾಮದಿಂದ ಸುಮಾರು 50 ಕಿಲೋಮೀಟರ್ ದೂರದ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. ಇಬ್ಬರನ್ನೂ ಅವರ ಕುಟುಂಬದ ಎದುರಲ್ಲೇ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಡಿಸೆಂಬರ್ 7ರಂದು ಸುಕ್ರಾ ಹಾಗೂ ಆಕೆಯ ಪತಿ ರಾಮಯ್ಯ ಯೆಲಮ್ ಅವರನ್ನು ಅಪಹರಿಸಲಾಗಿತ್ತು.
ಛತ್ತೀಸ್ಗಢ ಮತ್ತು ತೆಲಂಗಾಣದಲ್ಲಿ ಭದ್ರತಾ ಪಡೆಗಳಿಗೆ ಸುಕ್ರಾ ಮಾಹಿತಿ ನೀಡುತ್ತಿದ್ದರು ಎನ್ನುವುದು ಮಾವೋವಾದಿಗಳ ಆರೋಪ.
ಈ ದಂಪತಿಯನ್ನು ನಿರ್ದಯವಾಗಿ ಥಳಿಸಿದ್ದಲ್ಲದೇ ಬಳಿಕ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಲೊಡೇಡ್ ಗ್ರಾಮದ ಹೊರವಲಯದಲ್ಲಿ ದೇಹವನ್ನು ಎಸೆದಿದ್ದಾರೆ. ಗಾಯಗಳಾಗಿದ್ದ ಮತ್ತು ರಕ್ತಸಿಕ್ತವಾಗಿದ್ದ ರಾಮಯ್ಯ ಅವರನ್ನು ಕೂಡಾ ಮೃತದೇಹದ ಪಕ್ಕ ಎಸೆಯಲಾಗಿತ್ತು.
ಸುಕ್ರಾ ಮೃತದೇಹದ ಪಕ್ಕ ಮಾವೋವಾದಿಗಳ ಕರಪತ್ರ ಲಭ್ಯವಾಗಿದ್ದು, "ಸುಕ್ರಾ 2017ರಿಂದ ಪೊಲೀಸರ ಸಂಪರ್ಕ ಬೆಳೆಸಿದ್ದು, ನಮ್ಮ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಳು. 2017 ರಿಂದ 2024ರ ನಡುವೆ ಪೊಲೀಸರಿಗೆ ಮಾಹಿತಿ ನೀಡದಂತೆ ನಾಲ್ಕು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಪೊಲೀಸರ ಬಳಿಗೆ ತೆರಳಿ ನಮ್ಮ ಚಲನ ವಲನಗಳ ಬಗ್ಗೆ ಸುಳಿವು ನೀಡುತ್ತಿದ್ದಳು. ಇದರಿಂದಾಗಿ ಇತ್ತೀಚೆಗೆ ಏಳು ನಕ್ಸಲೀಯರು ಹತ್ಯೆಗೀಡಾಗಿದ್ದರು. ಆದ್ದರಿಂದ ಜನ ಅದಾಲತ್ ನಲ್ಲಿ ಆಕೆಯನ್ನು ಹತ್ಯೆ ಮಾಡಲಾಗಿದೆ" ಎಂಬ ವಿವರಣೆ ಇದೆ. ನಕ್ಸಲೀಯರು ಬಸ್ತರ್ ವಿಭಾಗದಲ್ಲಿ ಈ ವರ್ಷ 64 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾರೆ.