ಬಾಂಗ್ಲಾದೇಶದ ಇಸ್ಕಾನ್ ಘಟಕಕ್ಕೆ ಬೆಂಕಿ : ಇಸ್ಕಾನ್ ಕೋಲ್ಕತ ಉಪಾಧ್ಯಕ್ಷ ಆರೋಪ
ಕೋಲ್ಕತ : ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ತನ್ನ ಘಟಕವನ್ನು ಶನಿವಾರ ಮುಂಜಾನೆ ಸುಟ್ಟು ಹಾಕಲಾಗಿದೆ ಎಂದು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಮಾಜ (ಇಸ್ಕಾನ್) ಆರೋಪಿಸಿದೆ.
‘‘ಬಾಂಗ್ಲಾದೇಶದಲ್ಲಿರುವ ಇಸ್ಕಾನ್ ನಮ್‌ಹಟ್ಟ ಕೇಂದ್ರವನ್ನು ಸುಟ್ಟು ಹಾಕಲಾಗಿದೆ. ದೇವಸ್ಥಾನದಲ್ಲಿದ್ದ ಲಕ್ಷ್ಮೀನಾರಾಯಣ ದೇವರ ಮೂರ್ತಿಗಳು ಮತ್ತು ಇತರ ವಸ್ತುಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಲಾಗಿದೆ. ಈ ಘಟಕವು ಢಾಕಾದಲ್ಲಿದೆ’’ ಎಂದು ಇಸ್ಕಾನ್ ಕೋಲ್ಕತದ ಉಪಾಧ್ಯಕ್ಷ ರಾಧಾರಮಣ ದಾಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.
‘‘ಇಂದು ಮುಂಜಾನೆ, 2-3 ಗಂಟೆಯ ನಡುವೆ, ದುಷ್ಕರ್ಮಿಗಳು ರಾಧಾಕೃಷ್ಣ ದೇವಸ್ಥಾನ ಮತ್ತು ಮಹಾಭಾಗ್ಯ ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ. ಢಾಕಾ ಜಿಲ್ಲೆಯ ದೌರ್ ಗ್ರಾಮದಲ್ಲಿರುವ ಈ ದೇವಸ್ಥಾನಗಳು ಹರೇಕೃಷ್ಣ ನಮ್‌ಹಟ್ಟ ಸಂಘದ ವ್ಯಾಪ್ತಿಗೆ ಒಳಪಡುತ್ತವೆ’’ ಎಂದು ದಾಸ್ ಹೇಳಿದ್ದಾರೆ.
‘‘ದೇವಸ್ಥಾನದ ಹಿಂಭಾಗದಲ್ಲಿರುವ ತಗಡು ಹೊದಿಕೆಯ ಮೇಲ್ಛಾವಣಿಯನ್ನು ಕಿತ್ತು, ಪೆಟ್ರೋಲ್ ಅಥವಾ ಓಕ್ಟೇನ್ ಬಳಸಿ ಬೆಂಕಿ ಕೊಡಲಾಗಿದೆ’’ ಎಂದು ಅವರು ಬರೆದಿದ್ದಾರೆ.
ಬಳಿಕ, ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘‘ಸಮುದಾಯದ ಸದಸ್ಯರನ್ನು ಗುರಿಯಾಗಿಸಿ ನಡೆಲಾಗುತ್ತಿರುವ ದಾಳಿಗಳು ನಿರಂತರವಾಗಿ ಸಾಗುತ್ತಿವೆ. ಈ ವಿಷಯವನ್ನು ಇಸ್ಕಾನ್ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಗಮನಕ್ಕೆ ತಂದರೂ, ಸಮುದಾಯದ ಸದಸ್ಯರ ಕಳವಳಗಳನ್ನು ನಿವಾರಿಸಲು ಪೊಲೀಸರಾಗಲಿ, ಸರಕಾರವಾಗಲಿ ಹೆಚ್ಚೇನನ್ನೂ ಮಾಡುತ್ತಿಲ್ಲ’’ ಎಂದು ನುಡಿದರು.
ಆಗಸ್ಟ್‌ನಲ್ಲಿ, ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರಕಾರ ಪತನಗೊಂಡು ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವು ಅಸ್ತಿತ್ವಕ್ಕೆ ಬಂದ ಬಂದಂದಿನಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ, ಅದರಲ್ಲೂ ಮುಖ್ಯವಾಗಿ ಹಿಂದೂಗಳ ಮೇಲಿನ ದಾಳಿಗಳಲ್ಲಿ ಹೆಚ್ಚಳವಾಗಿದೆ.
ಕಳೆದ ನಾಲ್ಕು ತಿಂಗಳುಗಳ ಅವಧಿಯಲ್ಲಿ, ಬಾಂಗ್ಲಾದೇಶಾದ್ಯಂತ ಇರುವ ಇಸ್ಕಾನ್ ಕಟ್ಟಡಗಳ ಮೇಲೆ ದಾಳಿಗಳು ನಡೆಯುತ್ತಿವೆ.
ನವೆಂಬರ್ 25ರಂದು ಇಸ್ಕಾನ್ ಬಾಂಗ್ಲಾದೇಶ ಘಟಕದ ಮುಖ್ಯಸ್ಥ ಚಿನ್ಮಯ್ ಕೃಷ್ಣ ದಾಸ್‌ರನ್ನು ಬಂಧಿಸಲಾಗಿತ್ತು.