ಭಾರತದಲ್ಲಿ ಇಸ್ಲಾಂ ವಿಶಿಷ್ಟ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

Update: 2023-07-11 13:11 GMT

ಹೊಸದಿಲ್ಲಿ: ಭಾರತವು ಶತಮಾನಗಳಿಂದ ಸಂಸ್ಕೃತಿಗಳು ಮತ್ತು ಧರ್ಮಗಳು ಸಾಮರಸ್ಯ ಹಾಗೂ ಸಹಬಾಳ್ವೆಯಿಂದ ಇರುವ ಸಮ್ಮಿಳನದ ಕೊಡವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ ಹೇಳಿದ್ದಾರೆ. ದೇಶದ ಧಾರ್ಮಿಕ ಗುಂಪುಗಳಲ್ಲಿ ಇಸ್ಲಾಂ ವಿಶಿಷ್ಟ ಮಹತ್ವದ ಸ್ಥಾನವನ್ನು ಹಾಗೂ ಹೆಮ್ಮೆಯನ್ನು ಹೊಂದಿದೆ ಎಂದೂ ಅವರು ಹೇಳಿದ್ದಾರೆ.

ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದೋವಲ್‌, ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧಗಳನ್ನು ಶ್ಲಾಘಿಸಿದ್ದಾರೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತ ಪ್ರವಾಸದಲ್ಲಿರುವ ಮುಸ್ಲಿಂ ವರ್ಲ್ಡ್ ಲೀಗ್ ಸೆಕ್ರೆಟರಿ ಜನರಲ್ ಶೇಖ್ ಡಾ. ಮಹಮ್ಮದ್ ಬಿನ್ ಅಬ್ದುಲ್‌ ಕರೀಮ್ ಅಲ್-ಇಸ್ಸಾ ಅವರನ್ನು ಹೊಗಳಿದ ದೋವಲ್‌, ಅಲ್-ಇಸ್ಸಾ ಅವರು ಇಸ್ಲಾಮಿನ ಅಧಿಕೃತ ಜಾಗತಿಕ ಧ್ವನಿ ಮತ್ತು ಇಸ್ಲಾಂ ಧರ್ಮದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ವಿದ್ವಾಂಸ ಎಂದು ಶ್ಲಾಘಿಸಿದರು.

"ನಿಮ್ಮ (ಅಲ್-ಇಸ್ಸಾ) ಭಾಷಣದಲ್ಲಿ ನೀವು ವೈವಿಧ್ಯತೆಯನ್ನು ನಮ್ಮ ಅಸ್ತಿತ್ವದ ಮೂಲಭೂತ ಲಕ್ಷಣವೆಂದು ವಿವರವಾಗಿ ಉಲ್ಲೇಖಿಸಿದ್ದೀರಿ. ಇದು (ಭಾರತ) ಶತಮಾನಗಳಿಂದ ಸಾಮರಸ್ಯದಿಂದ ಸಹಬಾಳ್ವೆ ನಡೆಸಿದ ಸಂಸ್ಕೃತಿಗಳು, ಧರ್ಮಗಳು, ಭಾಷೆಗಳು ಮತ್ತು ಜನಾಂಗೀಯತೆಗಳ ಸಮ್ಮಿಳನವಾಗಿದೆ. ಭಾರತದಲ್ಲಿರುವ ಅಂತರ್ಗತ ಪ್ರಜಾಪ್ರಭುತ್ವವು, ತನ್ನ ಎಲ್ಲಾ ನಾಗರಿಕರಿಗೆ ಅವರ ಧಾರ್ಮಿಕ, ಜನಾಂಗೀಯ ಮತ್ತು ಸಾಂಸ್ಕೃತಿಕ ಗುರುತುಗಳನ್ನು ಲೆಕ್ಕಿಸದೆ ಅವರಿಗೆ ಜಾಗವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ" ಎಂದು ದೋವಲ್ ಹೇಳಿದರು.

"ಭಾರತದಲ್ಲಿ ಇಸ್ಲಾಂ ಧರ್ಮವು ವಿಶಿಷ್ಟ ಹೆಮ್ಮೆಯ ಮತ್ತು ಮಹತ್ವದ ಸ್ಥಾನವನ್ನು ಹೊಂದಿದೆ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ ಇರುವ ನೆಲವಾಗಿದೆ" ಎಂದು ದೋವಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News