ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್ ಆಸಕ್ತಿ
ಹೊಸದಿಲ್ಲಿ: ಅ.7 ರಿಂದ ಆರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಇಸ್ರೇಲ್‌ನಲ್ಲಿ ಫೆಲೆಸ್ತೀನ್ ಕಾರ್ಮಿಕರ ಕೊರತೆಗೆ ಕಾರಣವಾಗಿದೆ. ಈ ಅಂತರವನ್ನು ಭಾರತೀಯ ಕಾರ್ಮಿಕರು ತುಂಬಬಹುದು ಎಂದು newindianexpress.com ವರದಿ ಮಾಡಿದೆ.
"ನಾವು ಇಸ್ರೇಲ್‌ನಲ್ಲಿ ಕೆಲಸ ಮಾಡಲು ಭಾರತೀಯ ಉದ್ಯೋಗಿಗಳನ್ನು ಎದುರುನೋಡುತ್ತಿದ್ದೇವೆ. ನಿರ್ಮಾಣ ಚಟುವಟಿಕೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಇತರ ಕೆಲಸಗಳಿಗೆ ಸುಮಾರು 20,000 ಕಾರ್ಮಿಕರ ಅಗತ್ಯವಿದೆ. ಇನ್ನೂ ಈ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕಾರ್ಮಿಕರನ್ನು ಒದಗಿಸಲು ಭಾರತ ಸರ್ಕಾರವನ್ನು ಸಂಪರ್ಕಿಸಲಾಗಿದೆ" ಎಂದು ಮೂಲವೊಂದು ತಿಳಿಸಿದೆ.
ಯುದ್ಧ ಆರಂಭವಾದ ಬಳಿಕ ಸುಮಾರು 90,000 ಫೆಲೆಸ್ತೀನಿಯನ್ನರ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ. ಕಾರ್ಮಿಕರನ್ನು ಅವಲಂಬಿಸಿರುವ ಕೆಲಸಗಳಿಗೆ ಇದು ತೊಡಕಾಗಿದೆ.
ವರದಿಯೊಂದರ ಪ್ರಕಾರ, ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಹೈಮ್ ಫೀಗ್ಲಿನ್ ಅವರಿಗೆ ತಮ್ಮ ನಿರ್ಮಾಣ ಯೋಜನೆಗಳನ್ನು ಮುಂದುವರಿಸಲು 1 ಲಕ್ಷ ಕಾರ್ಮಿಕರು ಬೇಕಾಗಿದ್ದಾರೆ. ಅವರನ್ನು ಭಾರತದಿಂದ ಪಡೆಯಲು ಪ್ರಯತ್ನಗಳನ್ನು ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ.
ಈ ವರ್ಷದ ಮೇ ತಿಂಗಳಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇಸ್ರೇಲ್‌ನ ವಿದೇಶಾಂಗ ಸಚಿವ ಎಲಿ ಕೊಹೆನ್ ಅವರು ನಿರ್ಮಾಣ ಕ್ಷೇತ್ರಕ್ಕೆ ಸುಮಾರು 34000, ನರ್ಸಿಂಗ್ ಅಗತ್ಯಗಳಿಗಾಗಿ 8000 ಭಾರತೀಯ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಒಡಂಬಡಿಕೆಗೆ ಸಹಿ ಹಾಕಿದ್ದರು.
ಅ.7 ರಂದು ಸಂಘರ್ಷ ಪ್ರಾರಂಭವಾದಾಗ ಇಸ್ರೇಲ್‌ನಲ್ಲಿ 18000 ಕ್ಕೂ ಹೆಚ್ಚು ಭಾರತೀಯರು ಇದ್ದರು. ಬಳಿಕ, ಸುಮಾರು 1000 ಭಾರತೀಯರು ಅಲ್ಲಿಂದ ಹಿಂತಿರುಗಿದರು. ಹೆಚ್ಚಿನವರು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
ಭಾರತೀಯ ಸರ್ಕಾರ ಇಸ್ರೇಲ್‌ನ ಮನವಿಗೆ ಒಪ್ಪಿಗೆ ನೀಡಲಿದೆಯೇ? ಭಾರತೀಯ ಕಾರ್ಮಿಕರು ಇಸ್ರೇಲ್‌ಗೆ ಹೋಗಲು ಯಾವಾಗ ಅನುಮತಿ ಸಿಗಲಿದೆ ಎಂಬ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಇಸ್ರೇಲ್‌ನಲ್ಲಿದ್ದ ಫೆಲೆಸ್ತೀನ್ ಕಾರ್ಮಿಕರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ ಎಂಬ ವರದಿಗಳಿವೆ. ಏಕಾಏಕಿ ಸಂಘರ್ಷದಿಂದ 10,000 ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ಹೆಚ್ಚಿನ ಸಾವು ನೋವುಗಳ ಪ್ರಮಾಣವು ಇಸ್ರೇಲ್ ಮತ್ತು ಫೆಲಸ್ತೀನ್ ನಡುವೆ ವಿಶ್ವಾಸಾರ್ಹತೆ ಕುಗ್ಗಿಸಿದೆ. ಆದ್ದರಿಂದ ಕಾರ್ಮಿಕರು ಇಸ್ರೇಲ್ ತೊರೆದಿದ್ದಾರೆ.
ಇಸ್ರೇಲ್‌ನಲ್ಲಿರುವ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆ ಥೈಲಾಂಡ್ ನದ್ದು. ಆದರೆ, ಥೈಲ್ಯಾಂಡ್‌ನ ಕಾರ್ಮಿಕರಲ್ಲಿ ಹೆಚ್ಚಿನವರು ಸಂಘರ್ಷದ ಕಾರಣದಿಂದ ಕೆಲಸದಿಂದ ಹಿಂದೆ ಸರಿದಿದ್ದಾರೆ.