ದೇವೇಗೌಡರನ್ನು ಹೊರಗಿಟ್ಟು ತಿರುವನಂತಪುರಂನಲ್ಲಿ ಸಭೆ ನಡೆಸಿದ ವಿವಿಧ ರಾಜ್ಯಗಳ JDS ನಾಯಕರು; ಸಿ.ಎಂ.ಇಬ್ರಾಹಿಂ ಭಾಗಿ

Update: 2023-11-16 08:23 GMT

ತಿರುವನಂತಪುರಂ: ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಾಧಿವೇಶನ ನಡೆಸಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನನು, “ಒಂದು ವೇಳೆ ಎನ್ಡಿಎ ಸೇರ್ಪಡೆಯಾಗುವ ತಮ್ಮ ನಿರ್ಧಾರವನ್ನು ದೇವೇಗೌಡರು ರದ್ದುಪಡಿಸದಿದ್ದರೆ, ಡಿಸೆಂಬರ್ 9ರಂದು ನಡೆಯಲಿರುವ ರಾಷ್ಟ್ರೀಯ ಮಹಾಧಿವೇಶನದಲ್ಲಿ ಅವರ ನಿರ್ಧಾರವನ್ನು ಔಪಚಾರಿಕವಾಗಿ ತಳ್ಳಿ ಹಾಕಲಾಗುವುದು ಹಾಗೂ ಈ ಕುರಿತು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ದೇವೇಗೌಡರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ರಕ್ಷಿಸಬೇಕಾದ ಅಗತ್ಯವಿದೆ” ಎಂದು ಹೇಳಿದ್ದಾರೆ.

''ದೇವೇಗೌಡರಿಗೆ ಪತ್ರ''

ಮಹಾಧಿವೇಶನಕ್ಕೂ ಮುನ್ನ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಆಗ್ರಹಿಸುವ ಪತ್ರವೊಂದನ್ನು ದೇವೇಗೌಡರಿಗೆ ಹಸ್ತಾಂತರಿಸಲಾಗುತ್ತದೆ. ಈ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಕರ್ನಾಟಕದಿಂದ ಸಿ.ಎಂ.ಇಬ್ರಾಹಿಂ ಸೇರಿದಂತೆ ಒಟ್ಟು 11 ರಾಜ್ಯಗಳ ರಾಜ್ಯಾಧ್ಯಕ್ಷರು ವೈಯಕ್ತಿಕವಾಗಿ ಉಪಸ್ಥಿತರಿದ್ದರು ಹಾಗೂ ನಾಲ್ಕು ಮಂದಿ ರಾಜ್ಯಾಧ್ಯಕ್ಷರು ಆನ್ ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಿ.ಕೆ.ನನು ತಿಳಿಸಿದ್ದಾರೆ.

ತಿರುವನಂಪುರಂನಲ್ಲಿ ಆಯೋಜನೆಗೊಂಡಿದ್ದ ಈ ಸಭೆಯನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಎಂದು ಪರಿಗಣಿಸಲಾಗಿತ್ತಾದರೂ, ಈ ಸಭೆಯು ಕೇವಲ ದೇವೇಗೌಡರ ನಿರ್ಧಾರವನ್ನು ವಿರೋಧಿಸಲು ಸೇರಿದ್ದ ಸಭೆಯಾಗಿತ್ತು ಎಂದು ಸಿ.ಕೆ.ನನು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಕೇರಳದ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ. ಥಾಮಸ್ ಈ ಸಭೆಯಿಂದ ದೂರ ಉಳಿದರಲ್ಲದೆ, ತಮ್ಮ ರಾಜ್ಯದ ಪಕ್ಷದ ಪದಾಧಿಕಾರಿಗಳಿಗೂ ಈ ಸಭೆಗೆ ಹಾಜರಾಗದಂತೆ ಸೂಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News