ಎವರೆಸ್ಟ್ ಶಿಖರವನ್ನೇರಿದ ಭಾರತದ ಅತ್ಯಂತ ಕಿರಿಯ ಪರ್ವತಾರೋಹಿ ಕಾಮ್ಯಾ ಕಾರ್ತಿಕೇಯನ್

Update: 2024-05-23 17:24 GMT

ಕಾಮ್ಯಾ ಕಾರ್ತಿಕೇಯನ್

ಹೊಸದಿಲ್ಲಿ : ಮುಂಬೈನ 16ರ ಹರೆಯದ ಬಾಲಕಿ ಕಾಮ್ಯಾ ಕಾರ್ತಿಕೇಯನ್ ಅವರು ನೇಪಾಳದ ಕಡೆಯಿಂದ 8,849 ಮೀ.ಎತ್ತರದ ಎವರೆಸ್ಟ್ ಶಿಖರವನ್ನು ಏರಿದ ಭಾರತದ ಅತ್ಯಂತ ಕಿರಿಯ ಪರ್ವತಾರೋಹಿ ಮತ್ತು ವಿಶ್ವದ ಎರಡನೇ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಗಳು ಈ ಸಾಧನೆ ಮಾಡುವಾಗ ತಂದೆ ಭಾರತೀಯ ನೌಕಾಪಡೆಯ ಕಮಾಂಡರ್ ಎಸ್.ಕಾರ್ತಿಕೇಯನ್ ಜೊತೆಯಲ್ಲಿದ್ದು, ಮೇ 20ರಂದು ಇಬ್ಬರೂ ಯಶಸ್ವಿಯಾಗಿ ಎವರೆಸ್ಟ್ ಶಿಖರವನ್ನು ಏರಿದ್ದಾರೆ.

ಕಾರ್ತಿಕೇಯನ್ ಮತ್ತು ಕಾಮ್ಯಾ ಅವರನ್ನು ತನ್ನ ಎಕ್ಸ್ ಪೋಸ್ಟ್ ನಲ್ಲಿ ಅಭಿನಂದಿಸಿರುವ ಭಾರತೀಯ ನೌಕಾಪಡೆಯ ವೆಸ್ಟರ್ನ್ ಕಮಾಂಡ್, ಕಾಮ್ಯಾ ಏಳು ಖಂಡಗಳ ಪೈಕಿ ಆರರಲ್ಲಿಯ ಅತ್ಯುನ್ನತ ಶಿಖರಗಳನ್ನು ಜಯಿಸುವ ಮೂಲಕ ಭಾರೀ ಸಾಧನೆಯನ್ನು ಮಾಡಿದ್ದಾರೆ. ಎಲ್ಲ ಏಳು ಖಂಡಗಳಲ್ಲಿಯ ಅತ್ಯುನ್ನತ ಶಿಖರಗಳನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಅವರ ಮಹತ್ವಾಕಾಂಕ್ಷೆಗೆ ಶುಭ ಹಾರೈಸುತ್ತೇವೆ ಎಂದು ಟ್ವೀಟಿಸಿದೆ.

ಮುಂಬೈನ ನೇವಿ ಚಿಲ್ಡ್ರನ್ ಸ್ಕೂಲ್ನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿರುವ ಕಾಮ್ಯಾ ಎ.3ರಂದು ತಂದೆಯೊಂದಿಗೆ ಎವರೆಸ್ಟ್ ಆರೋಹಣವನ್ನು ಆರಂಭಿಸಿದ್ದರು.

ತನ್ನ ತಂದೆಯ ಪರ್ವತಾರೋಹಣ ಸಾಹಸಗಳಿಂದ ಸ್ಫೂರ್ತಿ ಪಡೆದಿದ್ದ ಕಾಮ್ಯಾ ಮೂರರ ಹರೆಯದಲ್ಲೇ ಚಾರಣವನ್ನು ಆರಂಭಿಸಿದ್ದರು. 2015ರಲ್ಲಿ ಏಳರ ಹರೆಯದಲ್ಲಿ ಚಂದ್ರಶಿಲಾ ಶಿಖರವನ್ನು ಹತ್ತುವ ಮೂಲಕ ತನ್ನ ಹಿಮಾಲಯ ವಿಜಯಗಾಥೆಗೆ ಬುನಾದಿ ಹಾಕಿದ್ದರು.

2016ರಲ್ಲಿ ಹೆಚ್ಚು ಕಠಿಣವಾದ ಹರ್-ಕಿ ದುನ್,ಕೇದಾರಕಾಂತ ಶಿಖರ ಮತ್ತು ರೂಪಕುಂಡ ಲೇಕ್ನಂತಹ ಕಠಿಣ ಸವಾಲುಗಳನ್ನು ಜಯಿಸಿದ್ದ ಕಾಮ್ಯಾ 2017ರಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡಿದ್ದರು.

2019ರಲ್ಲಿ ಅವರು ಹಿಮಾಚಲ ಪ್ರದೇಶದ 4,300 ಮೀ.ಎತ್ತರದ ಭೃಗು ಲೇಕನ್ನು ಏರಿದ್ದರು ಮತ್ತು ಸರ್ ಕಣಿವೆಯನ್ನು ಯಶಸ್ವಿಯಾಗಿ ದಾಟಿದ್ದರು. ಹಲವಾರು ಆಡಳಿತಾತ್ಮಕ ಮತ್ತು ದೈಹಿಕ ಸವಾಲುಗಳ ಹೊರತಾಗಿಯೂ ಅರ್ಜೆಂಟಿನಾದ ಅಕೊನ್ಕಾಗುವಾ ಪರ್ವತವನ್ನೇರಿದ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಯೂ ಅವರದಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News