ಕಾಂತಪುರಂ ಎ.ಪಿ ಉಸ್ತಾದ್ ಗೆ ಮಲೇಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
ಕೋಝಿಕ್ಕೋಡ್: ಮಲೇಷ್ಯಾ ಸರಕಾರ ಜಾಗತಿಕ ಇಸ್ಲಾಮಿಕ್ ವಿದ್ವಾಂಸರಿಗೆ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಹಿಜ್ರಾ ಪುರಸ್ಕಾರವನ್ನು ಮಲೇಷ್ಯಾದ ರಾಜ ಅಲ್ ಸುಲ್ತಾನ್ ಅಬ್ದುಲ್ಲಾಹ್ ಅಹ್ಮದ್ ಶಾ ಅವರು ಬುಧವಾರ ಕೌಲಾಲಂಪುರದ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ಪ್ರದಾನ ಮಾಡಿದರು.
ಪ್ರವಾದಿ ಮುಹಮ್ಮದ್ ( ಸ ) ಅವರ ಸ್ಮರಣಾರ್ಥ ಇಸ್ಲಾಮಿಕ್ ಕ್ಯಾಲೆಂಡರ್ ನ ಮೊದಲ ದಿನ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಕಾಂತಪುರಂ ಎ ಪಿ ಉಸ್ತಾದ್ ಪಾತ್ರರಾಗಿದ್ದಾರೆ. ಇದು ಇಸ್ಲಾಮಿಕ್ ಜಗತ್ತಿನಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿದೆ.
ಪ್ರಧಾನಿ ಅನ್ವರ್ ಇಬ್ರಾಹಿಂ, ಧಾರ್ಮಿಕ ಸಚಿವ ಮ್ಮದ್ ನಹೀಮ್ ಬಿನ್ ಮುಕ್ತಾರ್ ಸಹಿತ ಮಲೇಷ್ಯಾ ಸರಕಾರದ ಪ್ರಮುಖ ಸಚಿವರು , ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರ ವಿಶೇಷ ಆಹ್ವಾನದ ಮೇರೆಗೆ ಐದು ದಿನಗಳ ಪ್ರವಾಸಕ್ಕಾಗಿ ಎ.ಪಿ ಅಬೂಬಕರ್ ಮುಸ್ಲಿಯಾರ್ ಮಲೇಷ್ಯಾ ತಲುಪಿದ್ದಾರೆ.
ಇದಕ್ಕೂ ಮೊದಲು ಮಲೇಷ್ಯಾ ಪ್ರಧಾನಿ ಕಳುಹಿಸಿಕೊಟ್ಟ ವಿಶೇಷ ವಿಮಾನದ ಮೂಲಕ ಕೋಝಿಕ್ಕೋಡ್ ವಿಮಾನ ನಿಲ್ದಾಣದಿಂದ ತೆರಳಿ ಕೌಲಾಲಂಪುರ ವಿಮಾನ ನಿಲ್ದಾಣಕ್ಕೆ ತಲುಪಿದ್ದ ಕಾಂತಪುರಂ ಅವರನ್ನು ಸರ್ಕಾರಿ ಪ್ರತಿನಿಧಿಗಳು ಮತ್ತು ಮರ್ಕಝ್ ಗ್ಲೋಬಲ್ ಮಲೇಷಿಯಾ ಚಾಪ್ಟರ್ ಪ್ರತಿನಿಧಿಗಳು ಬರಮಾಡಿಕೊಂಡರು.
ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಂತಪುರಂ ಅವರು, 9 ತಿಂಗಳ ಬಳಿಕ, ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮಲೇಷ್ಯಾದಲ್ಲಿ ನಡೆಯಲಿರುವ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಜುಲೈ 22 ಶನಿವಾರ ಕಾಂತಪುರಂ, ಸಹೀಹುಲ್ ಬುಖಾರಿ ವಿದ್ವಾಂಸರ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಆ ಕಾರ್ಯಕ್ರಮವನ್ನು ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಉದ್ಘಾಟಿಸುವರು. ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಮುಹಮ್ಮದ್ ನಹೀಮ್ ಬಿನ್ ಮುಖ್ತಾರ್, ಶೇಖ್ ಡಾ. ಉಸಾಮಾ ಅಲ್ ಅಝ್ಹರಿ, ಮುಫ್ತಿ ಡಾ. ಲುಕ್ಮಾನ್ ಬಿನ್ ಹಾಜಿ ಅಬ್ದುಲ್ಲಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.