ದಿಲ್ಲಿ ಅಬಕಾರಿ ಹಗರಣದಲ್ಲಿ ಕವಿತಾರನ್ನು ರಕ್ಷಿಸಲು ಬಿಜೆಪಿ ನಾಯಕರ ಫೋನ್ ಕದ್ದಾಲಿಕೆಗೆ ಆದೇಶಿಸಿದ್ದ ಕೆ.ಸಿ.ಆರ್.: ಮಾಜಿ ಡಿಸಿಪಿ ಬಹಿರಂಗ

Update: 2024-05-28 18:35 GMT

ತೆಲಂಗಾಣ,: ದಿಲ್ಲಿ ಮದ್ಯ ನೀತಿ ಪರಿಷ್ಕರಣೆ ಹಗರಣದಲ್ಲಿ ಆರೋಪಿಯಾಗಿರುವ ತನ್ನ ಪುತ್ರಿ ಹಾಗೂ ಶಾಸಕಿ ಕೆ ಕವಿತಾಗೆ ಜಾಮೀನು ದೊರಕಿಸಿಕೊಡುವುದಕ್ಕೆ ಸಹಕರಿಸುವಂತೆ ಬಿಜೆಪಿಗೆ ಒತ್ತಡ ಹೇರುವ ಉದ್ದೇಶದಿಂದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು 2022ರ ಶಾಸಕರ ಕುದುರೆ ವ್ಯಾಪಾರ ಯತ್ನ ಪ್ರಕರಣವನ್ನು ಬಳಸಿಕೊಳ್ಳಲು ಬಯಸಿದ್ದರು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಹೈದರಾಬಾದ್ ಪೊಲೀಸ್ ಕಾರ್ಯಪಡೆಯ ಮಾಜಿ ಡಿಸಿಪಿ ರಾಧಾ ಕಿಶನ್ ರಾವ್ ಅವರು ಸಲ್ಲಿಸಿದ ತಪ್ಪೊಪ್ಪಿಗೆ ವರದಿಯಲ್ಲಿ ಅವರು ಈ ವಿಷಯವನ್ನು ಉಲ್ಲೇಖಿಸಿದ್ದಾರೆ ಎಂದು ʼಟೈಮ್ಸ್ ಆಫ್ ಇಂಡಿಯಾʼ ಪತ್ರಿಕೆಯ ವರದಿ ತಿಳಿಸಿದೆ.

ಆಗ ಮುಖ್ಯಮಂತ್ರಿಯಾಗಿದ್ದ ಕೆ.ಚಂದ್ರಶೇಖರ್ ರಾವ್ ಅವರು ಟಿಆರ್‌ಎಸ್‌ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರ ಫೋನ್ ಕದ್ದಾಲಿಕೆಗೆ ಆದೇಶಿಸಿದ್ದರು. ಈ ಪ್ರಕರಣದಲ್ಲಿ ಬಿಜೆಪಿಯ ಪದಾಧಿಕಾರಿ ಬಿ.ಎಲ್.ಸಂತೋಷ್ ಅವರ ಬಂಧಿಸುವಂತೆಯೂ ಆದೇಶಿಸಿದ್ದರು. ಆದರೆ ಪ್ರಕರಣವು ತೆಲಂಗಾಣ ಹೈಕೋರ್ಟ್ ಮೆಟ್ಟಲೇರಿದ್ದು, ಆನಂತರ ಅದನ್ನು ನ್ಯಾಯಾಲಯ ಸಿಬಿಐಗೆ ಹಸ್ತಾಂತರಿಸಿತ್ತು. ಇದರಿಂದಾಗಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆ.ಸಿ.ಆರ್. ಅವರ ಪ್ರಯತ್ನ ವಿಫಲವಾಯಿತೆಂದು ವರದಿ ಹೇಳಿದೆ.

ಬಿಜೆಪಿಯ ಕೆಲವು ಪ್ರಭಾವಿ ವ್ಯಕ್ತಿಗಳೆನ್ನಲಾದ ಕೆಲವರು ತನ್ನ ಜೊತೆ ಸಂಪರ್ಕದಲ್ಲಿದ್ದು, ಬಿಆರ್‌ಎಸ್ ಕೆಲವು ಶಾಸಕರೊಂದಿಗೆ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರುವಂತೆ ಅವರು ತನ್ನ ಮನವೊಲಿಸಲು ಯತ್ನಿಸುತ್ತಿದ್ದಾರೆಂದು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರು ಮುಖ್ಯಮಂತ್ರಿ ಕೆ.ಸಿ.ಆರ್.ತಿಳಿಸಿದ್ದರು. ಆಗ ವಿಶೇಷ ಗುಪ್ತಚರದಳದ ವರಿಷ್ಠರಾಗಿದ್ದ ಟಿ.ಪ್ರಭಾಕರ ರಾವ್ ಅವರು ಈ ವಿಷಯವನ್ನು ತನಗೆ ಹೇಳಿದ್ದರೆಂದು ರಾಧಾ ಕಿಶನ್ ರಾವ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

ಕೆ.ಸಿ.ಆರ್. ಸೂಚನೆಯಂತೆ ಎಸ್ಐಬಿಯ ಮಾಜಿ ಡಿವೈಎಸ್ಪಿ ಡಿ.ಪ್ರಣೀತ್ರಾವ್ ಅವರು ಕೆಲವು ವ್ಯಕ್ತಿಗಳು ಹಾಗೂ ಶಾಸಕರೊಬ್ಬರ ಫೋನನ್ನು ಕದ್ದಾಲಿಸಿದ್ದರು ಮತ್ತು ಈ ಕುರಿತ ಅಡಿಯೋ ತುಣುಕನ್ನು ಕೂಡಾ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ್ದರು. ಆನಂತರ ಮುಖ್ಯಮಂತ್ರಿಯವರು ಬಿಜೆಪಿ ನಾಯಕರ ಬಂಧನಕ್ಕೆ ಜಾಲ ಬೀಸುವಂತೆ ಸೂಚಿಸಿದ್ದರು. ಅಲ್ಲದೆ ಪೊಲೀಸರೊಂದಿಗೆ ಸಹಕರಿಸುವಂತೆಯೂ ಶಾಸಕ ರೋಹಿತ್ಗೆ ತಿಳಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಇನ್ನೂ ಮೂವರು ಶಾಸಕರು ಪಾಲ್ಗೊಳ್ಳುವಂತೆಯೂ ಕೆ.ಸಿ.ಆರ್.ಸೂಚಿಸಿದ್ದರೆಂದು ರಾಧಾ ಕಿಶನ್ ರಾವ್ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News