ಕೇರಳ| ಹೆದ್ದಾರಿಯಲ್ಲಿ ಕಾರು ತಡೆದು 2.5 ಕೆಜಿ ಚಿನ್ನಾಭರಣ ದರೋಡೆ: ವಿಡಿಯೋ ವೈರಲ್
ಹೊಸದಿಲ್ಲಿ: ಕೇರಳದ ತ್ರಿಶ್ಶೂರ್ ಬಳಿಯ ಪೀಚಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ದರೋಡೆ ಪ್ರಕರಣದ ಡ್ಯಾಷ್ ಕ್ಯಾಮ್ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆದ್ದಾರಿಯಲ್ಲಿ ಕಾರನ್ನು ತಡೆದ 12 ಮಂದಿ ಡಕಾಯಿತರ ಗುಂಪು ಆ ಕಾರಿನಲ್ಲಿದ್ದ ಇಬ್ಬರ ಸಹಿತ 2.5 ಕೆ.ಜಿ ಚಿನ್ನವನ್ನು ದರೋಡೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ. ನಿರ್ಮಾಣ ಹಂತದ ಫ್ಲೈಓವರ್ ನಲ್ಲಿ ಕಾರೊಂದನ್ನು ಗುರಿಯಾಗಿಸಿ ಬಂದ ಮೂರು ಕಾರುಗಳು ಹೆದ್ದಾರಿಯಲ್ಲಿ ಬ್ಲಾಕ್ ಮಾಡಿವೆ.
ಚಿನ್ನ ಸಾಗಿಸುತ್ತಿದ್ದ ಕಾರನ್ನು ಇತರ ಮೂರು ಕಾರುಗಳು ಅಡ್ಡಗಟ್ಟಿ, ಬಳಿಕ ಮೂರೂ ಕಾರುಗಳಿಂದ ಬಂದ 12 ಮಂದಿ ಗುಂಪುಗಟ್ಟಿ ಇಬ್ಬರನ್ನು ಅಪಹರಿಸಿದ್ದಾರೆ. ಈ ಸಂಬಂಧ ಬುಧವಾರ ದೂರು ನೀಡಲಾಗಿದ್ದು, ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸೆಪ್ಟೆಂಬರ್ 22ರಂದು ನಡೆದಿದ್ದು, ಅಪಹರಣಕ್ಕೊಳಗಾದವರು ಅರುಣ್ ಸನ್ನಿ ಮತ್ತು ರೋಜಿ ಥಾಮಸ್ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರನ್ನೂ ಚೆನ್ನಾಗಿ ಥಳಿಸಿದ ದರೋಡೆಕೋರರು 1.84 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಬಳಿಕ ಅಪಹೃತರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದು, ತನಿಖೆ ಪ್ರಗತಿಯಲ್ಲಿದೆ.