ಕೇರಳ: ಬಿಸಿಯೂಟ ವೆಚ್ಚ ಭರಿಸಲು ರೂ. 2 ಲಕ್ಷ ಸಾಲ ಪಡೆದ ಶಾಲೆಯ ಮುಖ್ಯ ಶಿಕ್ಷಕ
ತಿರುವನಂತಪುರಂ: ಕೇರಳದ ರಾಜಧಾನಿಯ ಕರಕುಳಂ ಎಂಬಲ್ಲಿರುವ ಅನುದಾನಿತ ವಿದ್ಯಾಧಿರಾಜ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜೆ ಪಿ ಅನೀಶ್ ಅವರು ತಮ್ಮ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲು ರೂ. 2 ಲಕ್ಷ ಸಾಲ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಈ ವರ್ಷ ಬಿಸಿಯೂಟ ಯೋಜನೆಗೆ ಅನುದಾನ ಬಿಡುಗಡೆಗೊಳಿಸದೇ ಇರುವುದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.
ಶಾಲಾ ಮುಖ್ಯೋಪಾಧ್ಯಾಯ ಜೆ ಪಿ ಅನೀಶ್ ಅವರು ಬಿಸಿಯೂಟಕ್ಕೆ ಅಗತ್ಯ ತರಕಾರಿ ಮತ್ತಿತರ ಸಾಮಗ್ರಿಗಳ ಖರೀದಿ ಬಿಲ್ ಚುಕ್ತಾಗೊಳಿಸಲು ಸಹಕಾರಿ ಬ್ಯಾಂಕ್ ಒಂದರಿಂದ ರೂ. 2 ಲಕ್ಷ ಸಾಲ ಪಡೆದುಕೊಂಡಿದ್ದಾರೆ. ಅವರ ಶಾಲೆಯಲ್ಲಿ 600 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಎಂಟನೇ ತರಗತಿ ತನಕದ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತದೆ.
ರೂ. 2 ಲಕ್ಷ ಸಾಲದ ಜೊತೆಗೆ ತಮ್ಮ ವೇತನದಿಂದ ರೂ. 50,000 ವನ್ನೂ ತಾವು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಬಳಸಿದ್ದಾಗಿ ಅನೀಶ್ ಹೇಳುತ್ತಾರೆ.
ತಾವು ಪಡೆದ ಸಾಲದ ಕುರಿತ ದಾಖಲೆ ಸಹಿತ ಅನೀಶ್ ಅವರು ಸಹಾಯಕ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಸಾಲವನ್ನು ಅವರು ಆಗಸ್ಟ್ 27ರಂದು ಪಡೆದಿದ್ದಾರೆ.
ಮಧ್ಯಾಹ್ನದ ಬಿಸಿಯೂಟಕ್ಕಾಗಿ ಕೇಂದ್ರ ಸರ್ಕಾರ ಶೇ.60ರಷ್ಟು ವೆಚ್ಚವನ್ನು ಹಾಗೂ ರಾಜ್ಯ ಸರ್ಕಾರ ಶೇ40 ವೆಚ್ಚವನ್ನು ಭರಿಸುತ್ತವೆ.
ರಾಜ್ಯ ಶಿಕ್ಷಣ ಸಚಿವರ ಕಚೇರಿ ಮಾಹಿತಿ ಪ್ರಕಾರ ಆರ್ಥಿಕ ವರ್ಷ 2021-22ರಲ್ಲಿ ಎರಡನೇ ಕಂತಿನ ಮೊತ್ತವಾದ ರೂ. 132 ಕೋಟಿಯನ್ನು ಕೇಂದ್ರ ಸರ್ಕಾರ ವಿಳಂಬವಾಗಿ ನೀಡಿದ್ದರೆ ರಾಜ್ಯ ಸರ್ಕಾರ ನಿಗದಿತ ಸಮಯದಲ್ಲಿ ನೀಡಿದೆ.
ಅನುದಾನ ಕುರಿತು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಪರ್ಕದಲ್ಲಿದೆ ಹಾಗೂ ಆರು ಪತ್ರಗಳನ್ನು ಬರೆಯಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವಾಲಯ ಹೇಳಿದೆ.