ಕಾಸರಗೋಡು ಜಿಲ್ಲೆಯ ಶಾಲೆಗಳಿಗೆ ಕನ್ನಡ ತಿಳಿದ ಶಿಕ್ಷಕರ ನೇಮಕಕ್ಕೆ ಕೇರಳ ಹೈಕೋರ್ಟ್ ಆದೇಶ

Update: 2023-08-25 17:07 GMT

 ಕೇರಳ ಹೈಕೋರ್ಟ್ | Photo; PTI 

ತಿರುವನಂತಪುರ: ಕಾಸರಗೋಡು ಜಿಲ್ಲೆಯ ಅಡೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯ ಕನ್ನಡ ವಿಭಾಗಕ್ಕೆ ಮಲಯಾಳಿ ಶಿಕ್ಷಕಿಯನ್ನು ನೇಮಕ ಮಾಡಿರುವುದಕ್ಕೆ ಕೇರಳ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇರಳ ಉಚ್ಚ ನ್ಯಾಯಾಲಯ, ಅಲ್ಲಿಗೆ ಕೂಡಲೇ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಕ ಮಾಡುವಂತೆ ಆದೇಶಿಸಿದೆ. ಇದರಿಂದ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ಎದುರಿಸುತ್ತಿದ ಸಮಸ್ಯೆ ಪರಿಹಾರವಾದಂತಾಗಿದೆ.

ಜೊತೆಗೆ ಕೆಲವು ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರಕಾರ, ಶಿಕ್ಷಣ ಇಲಾಖೆ ಹಾಗೂ ಕೇರಳ ಲೋಕಸೇವಾ ಆಯೋಗಕ್ಕೆ ಅತೀ ದೊಡ್ಡ ಹಿನ್ನಡೆ ಉಂಟಾಗಿದೆ.

ಓಣಂ ಹಬ್ಬದ ರಜೆ ಕಳೆದ ಕೂಡಲೇ ಕನ್ನಡ ಶಿಕ್ಷಕಿಯನ್ನು ಶಾಲೆಗೆ ನೇಮಕ ಮಾಡಬೇಕೆಂದು ಆದೇಶಿಸಿರುವ ನ್ಯಾಯಾಲಯ, ಅಲ್ಲಿ ಈಗಾಗಲೇ ನೇಮಕವಾಗಿರುವ ಮಲೆಯಾಳಿ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದೆ.

ಅಡೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ಜೂನ್ 3ರಂದು ಕನ್ನಡ ತಿಳಿಯದ ಮಲೆಯಾಳಿ ಶಿಕ್ಷಕಿಯನ್ನು ಕನ್ನಡ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಕಲಿಸಲು ನೇಮಕ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿದಾಗ ಶಾಲೆಯ ಮುಖ್ಯೋಪಾಧ್ಯಾಯರನ್ನು ವರ್ಗಾಯಿಸಲಾಗಿತ್ತು.

ಆದರೆ, ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯರು, ಕನ್ನಡಾಭಿಮಾನಿಗಳು ಸೇರಿ ಹೋರಾಟ ಸಮಿತಿ ರೂಪೀಕರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಾದ ಆಲಿಸಿದ ನ್ಯಾಯಾಲಯ ಕನ್ನಡ ವಿದ್ಯಾರ್ಥಿಗಳಿಗೆ ಭಾಷೆ ತಿಳಿಯದ ಶಿಕ್ಷಕಿಯಿಂದ ಪಾಠ ಮಾಡಲು ಸಾಧ್ಯವಿಲ್ಲವೆಂದು ಮನಗಂಡು ಅವರನ್ನು ಬೇರೆಡೆಗೆ ವರ್ಗಾಯಿಸಿ ಕನ್ನಡ ತಿಳಿದಿರುವ ಶಿಕ್ಷಕಿಯನ್ನು ನೇಮಕ ಮಾಡಲು ಆದೇಶಿಸಿದೆ.

ಕಳೆದ ವರ್ಷ ಉದುಮ ಹಾಗೂ ಹೊಸದುರ್ಗ ಸರಕಾರಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮ ವಿಭಾಗಕ್ಕೆ ಕೂಡ ಇದೇ ರೀತಿ ಮಲಯಾಳಿ ಶಿಕ್ಷಕಿಯನ್ನು ನೇಮಕ ಮಾಡಲಾಗಿತ್ತು.

ಕಸಾಪ ಸ್ವಾಗತ

ಕನ್ನಡ ಶಾಲೆಗೆ ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನೇ ನೇಮಕ ಮಾಡುವಂತೆ ಕೇರಳ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿರುವುದನ್ನು ಕಸಾಪ ಸ್ವಾಗತಿಸುತ್ತಿದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಪ್ರಕಟಣೆ ನೀಡಿರುವ ಅವರು, ‘‘ಇದೀಗ ಅಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕಿ ಪಾಠ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿರುವುದು ಗಡಿನಾಡ ಕನ್ನಡಿಗರ ಹೋರಾಟಕ್ಕೆ ಸಿಕ್ಕಿದ ಜಯ. ಕೇರಳ ಹೈಕೋರ್ಟ್‌ನ ಈ ತೀರ್ಪನ್ನು ಎಲ್ಲ ಕನ್ನಡ ಮಾಧ್ಯಮ ಶಾಲೆಗಳಿಗೆ ಅನ್ವಯಿಸುವಂತೆ ವಾದ ಮಂಡಿಸಿದ್ದು ಸ್ವಾಗತಾರ್ಹ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News