ಕೇರಳ: 20 ಗಂಟೆಗಳ ಬಳಿಕ ಅಪಹರಣಕ್ಕೊಳಗಾದ ಮಗು ಪತ್ತೆ

Update: 2023-11-28 13:12 GMT

ಅಬಿಗೆಲ್‌ ಸಾರಾ ರೇಜಿಳ (Photo credit: onmanorama.com)

ತಿರುವನಂತಪುರಂ: ಕೇರಳದ ಕೊಲ್ಲಂನ ಓಯೂರ್‌ ನಿಂದ ಆರು ವರ್ಷದ ಮಗುವನ್ನು ಅಪಹರಿಸಿದ ಇಪ್ಪತ್ತು ಗಂಟೆಗಳೊಳಗೆ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ.

ನವೆಂಬರ್ 28 ರ ಮಂಗಳವಾರ, ಬಾಲಕಿಯ ಮನೆಯಿಂದ ಸುಮಾರು 25 ಕಿಮೀ ದೂರದಲ್ಲಿರುವ ನಗರದ ಆಶ್ರಮಮ್ ಮೈದಾನದಲ್ಲಿ ಬಾಲಕಿ ಅಬಿಗೈಲ್ ಸಾರಾ ರೆಜಿ ಪತ್ತೆಯಾಗಿದ್ದಾಳೆ.

ಮಗುವನ್ನು ಅಪಹರಿಸಿದ ನಾಲ್ವರು ತಲೆಮರೆಸಿಕೊಂಡಿದ್ದು, ಅದಕ್ಕೂ ಮುನ್ನ ಮಗುವನ್ನು ತೊರೆದು ಹೋಗಿದ್ದಾರೆ.

ಮಗುವನ್ನು ಅಪಹರಿಸಿದ ಕಾರಿನ ವಿವರಗಳನ್ನು ಪತ್ತೆಹಚ್ಚಿ, ಅಪಹರಣಕಾರರಲ್ಲಿ ಒಬ್ಬನ ರೇಖಾಚಿತ್ರವನ್ನು ರಚಿಸಿದ್ದರು. ಇದರಿಂದ ಅಪಹರಣಕಾರರು ತಮ್ಮೊಂದಿಗೆ ಮಗುವನ್ನು ಕರೆದೊಯ್ಯುವುದು ಅಪಾಯಕಾರಿ ಎಂದು ಮಗುವನ್ನು ಬಿಟ್ಟು ಹೋಗಿರಬೇಕೆಂದು ಅಂದಾಜಿಸಲಾಗಿದೆ.

ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದ್ದ ಪೊಲೀಸರು, ಯಾವುದೇ ಮಾಹಿತಿಯಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಲು ಸಾರ್ವಜನಿಕರಿಗೆ ಮನವಿ ಮಾಡಿದ್ದರು.

ಕೆಲವು ದಾರಿಹೋಕರು ಮೈದಾನದಲ್ಲಿರುವ ಮಗುವನ್ನು ಗುರುತಿಸಿದ್ದು, ತಕ್ಷಣ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಕೊಲ್ಲಂ ಪೂರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ಮನೆಗೆ ಕರೆ ತಂದಿದ್ದಾರೆ. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ನವೆಂಬರ್ 27 ರಂದು ಸಂಜೆ ಮಗು ತನ್ನ ಮನೆಯ ಸಮೀಪವಿರುವ ತನ್ನ ಟ್ಯೂಷನ್ ಸೆಂಟರ್‌ಗೆ ತನ್ನ ಸಹೋದರನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪಹರಿಸಲಾಗಿತ್ತು. ಕಾರಿನಲ್ಲಿ ಬಂದ ಅಪಹರಣಕಾರರು ಮಗುವನ್ನು ಅಪಹರಿಸಿದ್ದರು. ಬಳಿಕ ಮಗುವಿನ ತಾಯಿಗೆ ಕೊಡುವಂತೆ ಅಪಹರಣಕಾರರು ಬೆದರಿಕೆ ಪತ್ರವನ್ನು ನೀಡಿದ್ದರು. ʼಆದರೆ, ನಾನು ಅದನ್ನು ತೆಗೆದುಕೊಳ್ಳಲಿಲ್ಲ, ಅವರು ಅವಳನ್ನು ಕಾರಿಗೆ ಎಳೆದು ಹಾಕಿದರುʼ ಎಂದು ಬಾಲಕ ತಿಳಿಸಿದ್ದ. ಅಲ್ಲದೆ, ವಾಹನದಲ್ಲಿ ಮೂವರು ಪುರುಷರು ಮತ್ತು ಓರ್ವ ಮಹಿಳೆ ಇದ್ದರು ಎಂದು ಬಾಲಕ ಹೇಳಿದ್ದ.

ಸಂಜೆ 4.45 ರ ಸುಮಾರಿಗೆ ಅಪಹರಣ ಸಂಭವಿಸಿದ್ದು, ಮೂರು ಗಂಟೆಗಳ ನಂತರ ಮಗುವಿನ ತಾಯಿಗೆ ಅಪಹರಣಕಾರರಿಂದ ಸುಲಿಗೆ ಕರೆ ಬಂದಿತ್ತು. ಮೊದಲಿಗೆ 5 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಬಳಿಕ ಸುಲಿಗೆ ಮೊತ್ತವನ್ನು 10 ಲಕ್ಷಕ್ಕೆ ಏರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News