ಪಡಿತರ ಅಂಗಡಿಗಳೆದುರು ಮೋದಿ ಭಾವಚಿತ್ರ ಪ್ರದರ್ಶಿಸಬೇಕು ಎಂಬ ಕೇಂದ್ರದ ಸೂಚನೆಯನ್ನು ತಿರಸ್ಕರಿಸಿದ ಕೇರಳ ಸರಕಾರ
ತಿರುವನಂತಪುರಂ: ಪಡಿತರ ಅಂಗಡಿಗಳೆದುರು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಪ್ರದರ್ಶಿಸಬೇಕು ಹಾಗೂ ಅವುಗಳೆದುರು ಸೆಲ್ಫಿ ಪಾಯಿಂಟ್ ಅನ್ನು ಸ್ಥಾಪಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯನ್ನು ಕೇರಳದ ಎಡರಂಗ ಸರಕಾರವು ತಿರಸ್ಕರಿಸಿದೆ ಎಂದು deccanherald.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ಈ ಸೂಚನೆಯು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕೇಂದ್ರದಲ್ಲಿ ತನ್ನ ಚುನಾವಣಾ ಅವಕಾಶವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವ ನಿಟ್ಟಿನ ನಡೆಯಾಗಿದೆ ಹಾಗೂ ಈ ಸೂಚನೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ" ಎಂದು ಘೋಷಿಸಿದ್ದಾರೆ. ಮುಂದುವರಿದು, ಈ ಕುರಿತು ತನ್ನ ಅಸಮ್ಮತಿಯ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದ್ದು, ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೂ ತರಲಾಗುವುದು ಎಂದು ಪ್ರಕಟಿಸಿದ್ದಾರೆ.
ಇದಕ್ಕೂ ಮುನ್ನ, ಲೈಫ್ ಮಿಷನ್ ಯೋಜನೆಯಡಿ ನಿರ್ಮಿಸಲಾಗಿರುವ ನಿವಾಸಗಳ ಮೇಲೆ ಪಿಎಂಎವೈ ಲೋಗೊವನ್ನು ಪ್ರದರ್ಶಿಸಬೇಕು ಎಂಬ ಕೇಂದ್ರ ಸರಕಾರದ ನಿರ್ದೇಶನವನ್ನೂ ಕೇರಳ ತಿರಸ್ಕರಿಸಿತ್ತು.