ಕೇರಳ | ಬಿಜೆಪಿ ಲೋಕಸಭಾ ಅಭ್ಯರ್ಥಿಯ ಮೇಲಿನ ದಾಳಿಯಲ್ಲಿ ಸ್ವಪಕ್ಷಿಯ ಮುಖಂಡನೇ ಆರೋಪಿ!
ಕೊಲ್ಲಂ (ಕೇರಳ): ಕೇರಳದ ಕೊಲ್ಲಂನ ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಕೃಷ್ಣಕುಮಾರ್ ಅವರು ಮುಜುಗರದ ಪರಿಸ್ಥಿತಿಗೆ ಸಿಲುಕಿದ್ದು, ತಮ್ಮದೇ ಪಕ್ಷದ ಸ್ಥಳೀಯ ನಾಯಕರೊಬ್ಬರು ನಟ-ರಾಜಕಾರಣಿಯೂ ಆಗಿರುವ ಜಿ.ಕೃಷ್ಣಕುಮಾರ್ ಅವರ ಮೇಲಿನ ಹಲ್ಲೆಯ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿರುಸಿನ ಚುನಾವಣಾ ಪ್ರಚಾರದ ವೇಳೆ, ರಾಜಕೀಯ ವಿರೋಧಿಗಳು ತಮ್ಮ ಮೇಲೆ ಬಲವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ ಎಂದು ಕೃಷ್ಣಕುಮಾರ್ ಇತ್ತೀಚೆಗೆ ಕುಂದರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಬಿಜೆಪಿಯ ಸ್ಥಳೀಯ ಮುಖಂಡ ಸನಲ್ ಪುತನ್ವಿಲಾ, ಸ್ಕೂಟರ್ ಕೀಲಿಯಿಂದ ಜಿ. ಕೃಷ್ಣಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಘಟನೆಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್ ಅವರ ಕಣ್ಣಿಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿ ಸನಲ್ ಪುತನ್ವಿಲಾ ಅವರನ್ನು ಸೋಮವಾರ ಬಂಧಿಸಿದ ಪೊಲೀಸರು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಏಪ್ರಿಲ್ 22 ರಂದು, ಜಿ. ಕೃಷ್ಣಕುಮಾರ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ, “ಕೇರಳದ ಕೊಲ್ಲಂನ ಕುಂದ್ರಾದಲ್ಲಿ ನನ್ನ ಲೋಕಸಭಾ ಪ್ರಚಾರದ ವೇಳೆ ನನ್ನ ಕಣ್ಣಿಗೆ (ವಿರೋಧ ಪಕ್ಷಗಳ ಶಂಕಿತ ದಾಳಿ) ಗಾಯವಾಗಿದೆ. ಈ ಸಮಯದಲ್ಲಿ ನಿಮ್ಮ ಪ್ರಾರ್ಥನೆಗಳು ಮತ್ತು ಬೆಂಬಲವು ನನ್ನ ಮೇಲಿರಲಿ” ಎಂದು ಪೋಸ್ಟ್ ಮಾಡಿದ್ದರು.