ಜಮೀನು ವಿವಾದ : ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ ನಡೆಸಿದ ಬಿಜೆಪಿ ಶಾಸಕ

Update: 2024-02-03 10:28 GMT

 ಮಹೇಶ್ ಗಾಯಕ್ವಾಡ್‌ Photo: facebook

ಮುಂಬೈ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕರೊಬ್ಬರು ಶಿವಸೇನೆಯ ನಗರ ಘಟಕದ ಮುಖ್ಯಸ್ಥರ ಮೇಲೆ ಗುಂಡು ಹಾರಿಸಿರುವ ಘಟನೆ ತಡರಾತ್ರಿ ನಡೆದಿದೆ ಎಂದು ndtv ವರದಿ ಮಾಡಿದೆ.

ಗುಂಡು ಹಾರಿಸಿದ ಶಾಸಕರನ್ನು ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಸದಸ್ಯ ಗಣಪತ್‌ ಗಾಯಕ್ವಾಡ್ ಎನ್ನಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಯ ನಗರ ಘಟಕದ ಮುಖ್ಯಸ್ಥ ಮಹೇಶ್ ಗಾಯಕ್ವಾಡ್‌ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಗಣಪತ್‌ ಗಾಯಕ್ವಾಡ್ ಮುಂಬೈನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಕಲ್ಯಾಣ್‌ನ ಕಲ್ಯಾಣ್ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರ ಬಿಜೆಪಿ ಪಕ್ಷವು ಮಹಾರಾಷ್ಟ್ರ ಸರ್ಕಾರದಲ್ಲಿ ಶಿಂದೆ ಅವರ ಶಿವಸೇನೆಯೊಂದಿಗೆ ಮೈತ್ರಿ ಹೊಂದಿದೆ.

ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುಧಾಕರ ಪಠಾರೆ ತಿಳಿಸಿದ್ದಾರೆ.

ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಬಂದಿದ್ದರು. ಆದರೆ ಜಮೀನು ವಿವಾದದ ಮಾತುಕತೆ ತಾರಕಕ್ಕೇರಿದ ವೇಳೆ ಶಾಸಕರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಶಿವಸೇನಾ ನಾಯಕ ಮತ್ತು ಮತ್ತೊಬ್ಬ ಬೆಂಬಲಿಗರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ದೇಹದಿಂದ ಐದು ಗುಂಡುಗಳನ್ನು ಹೊರತೆಗೆಯಲಾಗಿದೆ, ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಬಂಧಿತರಾಗಿರುವ ಗಣಪತ್ ಗಾಯಕ್ವಾಡ್ ಅವರು ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿ, “ಮಹೇಶ್ ಗಾಯಕ್ವಾಡ್ ಅವರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾದ ಜಮೀನಿಗೆ ಸಂಬಂಧಿಸಿದಂತೆ ಸಮಸ್ಯೆಯಾಗಿದೆ. ಅವರು ತಮ್ಮ ಮಗನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆ” ಎಂದು ಹೇಳಿದ್ದಾರೆ.

"ಮಹೇಶ್ ಗಾಯಕ್ವಾಡ್ ಮತ್ತು ಗಣಪತ್ ಗಾಯಕ್ವಾಡ್ ಅವರ ನಡುವೆ ವಿವಾದವಿತ್ತು. ದೂರು ನೀಡಲು ಹಿಲ್ ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು, ಆದರೆ ಗಣಪತ್ ಗಾಯಕ್ವಾರ್ಡ್ ಮಾತುಕತೆಯ ಸಮಯದಲ್ಲಿ ಮಹೇಶ್ ಗಾಯಕ್ವಾಡ್ ಮತ್ತು ಅವರ ಸಹಚರರ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ", ಎಂದು ಡಿಸಿಪಿ ಪಠಾರೆ ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಸರ್ಕಾರವನ್ನು ಶಿವಸೇನೆಯ ಉದ್ಧವ್ ಠಾಕ್ರೆ ಬಣ ತರಾಟೆಗೆ ತೆಗೆದುಕೊಂಡಿದೆ. ''ಪೊಲೀಸ್ ಠಾಣೆಯೊಳಗೆ ಬಿಜೆಪಿ ಶಾಸಕ ಗುಂಡಿನ ದಾಳಿ ನಡೆಸಿದ್ದು, ಗುಂಡು ತಗುಲಿದ ವ್ಯಕ್ತಿ ಮಾಜಿ ಕಾರ್ಪೋರೇಟರ್, ಮುಖ್ಯಮಂತ್ರಿಯವರ ಆಪ್ತ. ಆರೋಪಿ ಶಾಸಕರ ಪಕ್ಷವೂ ಅಧಿಕಾರದಲ್ಲಿದೆ. ಇವರಿಗೆ ಕಾನೂನಿನ ಭಯವಿಲ್ಲ. ಕಾನೂನು ಸುವ್ಯವಸ್ತೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ” ಎಂದು ಉದ್ಧವ್ ಬಣದ ವಕ್ತಾರ ಆನಂದ್ ದುಬೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News