ಅಯೋಧ್ಯೆ | 50 ಲಕ್ಷ ಮೌಲ್ಯದ ದೀಪಗಳ ಕಳ್ಳತನ, ಎಫ್ ಐ ಆರ್ ದಾಖಲು

Update: 2024-08-14 05:08 GMT

Photo: PTI

ಅಯೋಧ್ಯೆ : ಅಯೋಧ್ಯೆಯ ಅತ್ಯಂತ ಸುರಕ್ಷತಾ ಪ್ರದೇಶದಲ್ಲಿರುವ ಭಕ್ತಿ ಪಥ್ ಮತ್ತು ರಾಂಪಥ್ ನಲ್ಲಿ ಅಳವಡಿಸಲಾಗಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ 3,800 ಬಿದಿರು ದೀಪ ಮತ್ತು 36 ಪ್ರೊಜೆಕ್ಟರ್ ಲೈಟ್‌ಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ನೀಡಿದ ಒಪ್ಪಂದದಡಿಯಲ್ಲಿ ದೀಪಗಳನ್ನು ಸ್ಥಾಪಿಸಿದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಆಟೋಮೊಬೈಲ್ಸ್‌ನ ಪ್ರತಿನಿಧಿಯಿಂದ ಆಗಸ್ಟ್ 9 ರಂದು ಈ ಬಗ್ಗೆ ದೂರು ದಾಖಲಾಗಿದ್ದು, ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಂಪಥ್ ನಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿ ಪಥ್ ನಲ್ಲಿ 96 ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಲಾಗಿತ್ತು. ಮಾರ್ಚ್ 19 ರವರೆಗೆ ಎಲ್ಲಾ ದೀಪಗಳು ಇದ್ದವು. ಆದರೆ ಮೇ 9 ರಂದು ಪರಿಶೀಲಿಸುವಾಗ ನಂತರ ಕೆಲವು ದೀಪಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.

ಇಲ್ಲಿಯವರೆಗೆ ಸುಮಾರು 3,800 ಬಿದಿರಿನ ದೀಪಗಳು ಮತ್ತು 36 ಪ್ರೊಜೆಕ್ಟರ್ ಲೈಟ್ ಗಳನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಸಂಸ್ಥೆಯ ಪ್ರತಿನಿಧಿ ಶೇಖರ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಸಂಸ್ಥೆಯು ಮೇ ತಿಂಗಳಲ್ಲಿ ಕಳ್ಳತನದ ಬಗ್ಗೆ ತಿಳಿದಿತ್ತು. ಆದರೆ ಆಗಸ್ಟ್ 9 ರಂದು ದೂರು ದಾಖಲಿಸಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ಮೊದಲು ನಗರವನ್ನು ನವೀಕರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News