ಮಹಾರಾಷ್ಟ್ರ | ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ Vs ಶಿಂದೆ ಸೇನೆ; ಮಹಾ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ Vs ಉದ್ಧವ್ ಸೇನೆ!
ಮುಂಬೈ: ಭಾರತೀಯ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿ, ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದರೂ, ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟವಾದ ಮಹಾಯುತಿ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ಅಘಾಡಿಯಲ್ಲಿ ಇನ್ನೂ ಆಂತರಿಕ ಕಲಹಗಳು ಮುಗಿದಿಲ್ಲ. ಹೀಗಾಗಿ ಈ ಎರಡೂ ಮೈತ್ರಿಕೂಟಗಳಿಗೂ ಸ್ಥಾನ ಹಂಚಿಕೆ ಒಪ್ಪಂದ ಹಾಗೂ ಅಭ್ಯರ್ಥಿಗಳ ಕುರಿತು ನಿರ್ಧರಿಸಲು ಸಾಧ್ಯವಾಗಿಲ್ಲ.
ಪ್ರತಿಷ್ಠಿತ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಪವಾರ್ ಕುಟುಂಬವೇ ಪೈಪೋಟಿಗೆ ಬಿದ್ದಿರುವಾಗ, ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣದಲ್ಲಿ ಗುರುತಿಸಿಕೊಂಡಿರುವ ಶಿವಸೇನೆ ನಾಯಕ ವಿಜಯ್ ಶಿವತಾರೆ ಕೂಡಾ ಇಲ್ಲಿಂದ ಕಣಕ್ಕಿಳಿಯುವುದಾಗಿ ಘೋಷಿಸುವ ಮೂಲಕ ಈ ಕಹಿ ಕಲಹಕ್ಕೆ ಹೊಸದೊಂದು ತಿರುವು ನೀಡಿದ್ದಾರೆ. ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ (ಶರದ್ ಪವಾರ್ ಎನ್ಸಿಪಿ) ಹಾಗೂ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ (ಅಜಿತ್ ಪವಾರ್ ಎನ್ಸಿಪಿ) ನಡುವೆ ನೇರಾನೇರ ಜಿದ್ದಾಜಿದ್ದಿ ಏರ್ಪಟ್ಟಿದೆ. ಈ ನಡುವೆ, ಸುನೇತ್ರಾ ಪವಾರ್ ಅವರನ್ನು ಪರಾಭವಗೊಳಿಸುವ ಮೂಲಕ ತನಗೆ ಅವಮಾನವೆಸಗಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಶಿವತಾರೆ ಘೋಷಿಸಿದ್ದಾರೆ.
ಒಂದು ವೇಳೆ ಶಿವತಾರೆಯನ್ನು ಸ್ಪರ್ಧೆಯಿಂದ ಹಿಂಪಡೆಯದಿದ್ದರೆ, ಮಹಾರಾಷ್ಟ್ರದಾದ್ಯಂತ ಶಿಂದೆ ಸೇನೆಯ ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬೆದರಿಕೆಯೊಡ್ಡಿದೆ. ಇದರ ಹೊರತಾಗಿಯೂ ಶಿವತಾರೆಯೇನಾದರೂ ಮುಂದುವರಿದು ನಾಮಪತ್ರಗಳನ್ನು ಸಲ್ಲಿಸಿದರೆ, ಅವರ ವಿರುದ್ಧ ಶಿಂದೆ ಬಣದ ಶಿವಸೇನೆಯು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಾಂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಹಾಗೂ ಶಿವಸೇನೆ(ಉದ್ಧವ್ ಬಣ)ದ ನಡುವೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಪೈಪೋಟಿ ಏರ್ಪಟ್ಟಿದೆ. ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ಜನಪ್ರಿಯ ಕುಸ್ತಿಪಟು ಚಂದ್ರಹಾರ್ ಪಾಟೀಲ್ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಕಟಿಸಿದ್ದರೆ, ಮಾಜಿ ಮುಖ್ಯಮಂತ್ರಿ ವಸಂತ್ ದಾದಾ ಪಾಟೀಲ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಘೋಷಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನ ಈ ನಿಲುವಿನಿಂದ ಅಸಮಾಧಾನಗೊಂಡಿರುವ ಶಿವಸೇನೆಯು, ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗಲು ತೀರ್ಮಾನಿಸಿದೆ. “ಸಾಂಗ್ಲಿ ಲೋಕಸಭಾ ಕ್ಷೇತ್ರದ ಮೇಲೆ ನಮ್ಮ ಪ್ರತಿಪಾದನೆಯಿದೆ. ನಾವು ಈಗಾಗಲೇ ಚಂದ್ರಹಾರ್ ಪಾಟೀಲ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಅವರು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ” ಎಂದು ಶಿವಸೇನೆ(ಉದ್ಧವ್ ಬಣ)ಯ ಮುಖ್ಯ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ನಾವು ಪಟೋಲೆಯೊಂದಿಗೆ ಮಾತನಾಡುವುದಿಲ್ಲ ಎಂದು ಉದ್ಧವ್ ಬಣದ ನಾಯಕರು ಸ್ಪಷ್ಟಪಡಿಸಿದ್ದಾರೆ. “ಪಟೋಲೆ ಪ್ರಕಟಣೆಯು ಉದ್ಧವ್ ಠಾಕ್ರೆಗೆ ನೋವನ್ನುಂಟು ಮಾಡಿದೆ. ಸ್ಥಾನ ಹಂಚಿಕೆ ಚರ್ಚೆಯ ಸಂದರ್ಭದಲ್ಲಿ ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ಶಿವಸೇನೆ ಸ್ಪರ್ಧಿಸಲಿದೆ ಎಂದು ನಿರ್ಧರಿಸಿರುವಾಗ, ಅವರು ತಾವಾಗಿಯೇ ಅಭ್ಯರ್ಥಿಯನ್ನು ಪ್ರಕಟಿಸಲು ಸಾಧ್ಯವಿಲ್ಲ” ಎಂದು ಶಿವಸೇನೆಯ ನಾಯಕರೊಬ್ಬರು ತಿಳಿಸಿದ್ದಾರೆ.
ತಮ್ಮ ಸ್ಥಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥ ಮಾಡಿಕೊಳ್ಳಲಿದೆ ಹಾಗೂ ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಹಸಿರು ನಿಶಾನೆ ತೋರಲಿದೆ ಎಂಬ ವಿಶ್ವಾಸವಿದೆ ಎಂದು ರಾವುತ್ ಹೇಳಿದ್ದಾರೆ. ಮತ್ತೊಂದೆಡೆ, ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ವಿಶಾಲ್ ಪಾಟೀಲ್ ಹೆಸರನ್ನು ಪ್ರಕಟಿಸಿದ್ದ ಪಟೋಲೆ, ಆ ಸ್ಥಾನದ ಕುರಿತು ಇನ್ನೂ ಮಾತುಕತೆಗಳು ಮುಂದುವರಿದಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಾರಾಮತಿ ಮತ್ತು ಸಾಂಗ್ಲಿ ಲೋಕಸಭಾ ಕ್ಷೇತ್ರಗಳಂತೆಯೆ ಸತಾರಾ ಲೋಕಸಭಾ ಕ್ಷೇತ್ರ ಕೂಡಾ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಡುವೆ ಕಗ್ಗಂಟಾಗಿ ಪರಿಣಮಿಸಿದೆ.
ಸತಾರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಿಂದೆ ನೇತೃತ್ವದ ಶಿವಸೇನೆ ಬಯಸುತ್ತಿದ್ದರೆ, ಅಜಿತ್ ಪವಾರ್ ಗುಂಪೂ ಕೂಡಾ ಆ ಕ್ಷೇತ್ರದ ಮೇಲೆ ತನ್ನ ಹಕ್ಕು ಪ್ರತಿಪಾದಿಸುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿಜೆಪಿಯ ರಾಜ್ಯಸಭಾ ಸದಸ್ಯ ಉದಯನ್ ರಾಜೆ ಭೋಸ್ಲೆ ಕೂಡಾ ಆ ಕ್ಷೇತ್ರದ ಮೇಲೆ ತಮ್ಮ ಕಣ್ಣು ನೆಟ್ಟಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾರೊಂದಿಗೆ ಮಾತುಕತೆ ನಡೆಸಲು ಅವರು ದಿಲ್ಲಿಗೆ ದೌಡಾಯಿಸಿದ್ದಾರೆ. ಎರಡು ದಿನಗಳಿಂದ ಶಾ ಅವರ ಸಮಯಾವಕಾಶ ಪಡೆಯಲು ಭೋಸ್ಲೆ ಪ್ರಯತ್ನಿಸುತ್ತಿದ್ದಾರೆ. ಭೋಸ್ಲೆ ನಿಕಟವರ್ತಿಗಳ ಪ್ರಕಾರ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸ್ನೇಹಿತರಾದ ಅಷ್ಟಮಠದ ಶ್ರೀನಿವಾಸ್ ಪಾಟೀಲ್ ವಿರುದ್ಧ 2019ರಲ್ಲಿ ಅನುಭವಿಸಿದ್ದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಅವರು ಬಯಸುತ್ತಿದ್ದಾರೆ. ಭಾರಿ ಮಳೆಯ ನಡುವೆಯೂ ಶರದ್ ಪವಾರ್ ಅವರು ಅಂದು ಮಾಡಿದ್ದ ಭಾಷಣದ ಕಾರಣಕ್ಕೆ ಶ್ರೀನಿವಾಸ್ ಪಾಟೀಲ್ ಪರವಾಗಿ ಮತದಾರರ ಅಲೆಯು ತಿರುಗಿತ್ತು ಎಂದು ನಂಬಲಾಗಿದೆ.
ಮಾಧಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಆಂತರಿಕ ಕಲಹ ಎದುರಿಸುತ್ತಿದೆ. ಹಾಲಿ ಸಂಸದ ರಂಜಿತ್ ಸಿನ್ಹ್ ನಾಯಕ್ ನಿಂಬಾಳ್ಕರ್ ಅವರನ್ನು ಬಿಜೆಪಿ ಮಾಧಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಆದರೆ, ಅವರ ಸಹೋದ್ಯೋಗಿಯಾದ ವಿಜಯ್ ಸಿನ್ಹ್ ಮೋಹಿತೆ ಪಾಟೀಲ್ ಕೂಡಾ ಆ ಕ್ಷೇತ್ರದ ಮೇಲೆ ತನ್ನ ಹಕ್ಕು ಪ್ರತಿಪಾದನೆ ಮಾಡುತ್ತಿದ್ದಾರೆ. ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದು, ತಮ್ಮ ಹೆಸರನ್ನು ಮಾಧಾ ಕ್ಷೇತ್ರಕ್ಕೆ ನಾಮಕರಣ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಶರದ್ ಪವಾರ್ ಮಾತ್ರ ಮಹಾದೇವ್ ಜಂಕರ್ ಪರವಾಗಿ ತಮ್ಮ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ರಂಜಿತ್ ಸಿನ್ಹ್ ನಾಯಕ್ ನಿಂಬಾಳ್ಕರ್, “ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ನಮ್ಮ ಉನ್ನತ ಮಟ್ಟದ ನಾಯಕರು ಈ ವಿಷಯವನ್ನು ಗಮನಿಸುತ್ತಿದ್ದು, ನನ್ನ ಸ್ಪರ್ಧೆಯನ್ನು ವಿರೋಧಿಸುತ್ತಿರುವುರನ್ನು ಸಮಾಧಾನ ಪಡಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾವಳ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ, ಬಿಜೆಪಿ ಮತ್ತು ಎನ್ಸಿಪಿ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ಕಳೆದ ಎರಡು ಅವಧಿಯಲ್ಲಿ, ಈ ಕ್ಷೇತ್ರದಿಂದ ಶಿವಸೇನೆಯು ಭಾರಿ ಅಂತರದಿಂದ ಗೆಲುವು ಸಾಧಿಸಿತ್ತು. ಆದರೆ, ಶಿವಸೇನೆಯ ಹಾಲಿ ಸಂಸದ ಶ್ರೀರಂಗ್ ಬಾರ್ನೆಯನ್ನು ಬಿಜೆಪಿ ಮತ್ತು ಎನ್ಸಿರಪಿಗಳೆರಡೂ ವಿರೋಧಿಸುತ್ತಿವೆ. ಮಾವಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯನ್ನು ಬಾರ್ನೆ ನಿಧಾನ ಗತಿಯಲ್ಲಿ ಮಾಡುತ್ತಿದ್ದಾರೆ ಎಂದು ಎನ್ಸಿಪಿ ಆರೋಪಿಸಿದ್ದರೆ, ಅವರ ಕಾರ್ಯವೈಖರಿಯನ್ನು ಬಿಜೆಪಿಯು ಆಕ್ಷೇಪಿಸಿದೆ.
ಸೌಜನ್ಯ: indianexpress.com