ಶಿರೂರು ಭೂಕುಸಿತ ಪ್ರಕರಣ: ಕೇರಳ ಲಾರಿ ಮಾಲಕ ಮನಾಫ್ ವಿರುದ್ಧ ದೂರು ನೀಡಿದ ಅರ್ಜುನ್ ಕುಟುಂಬ
ಕೇರಳ: ಕರ್ನಾಟಕದ ಶಿರೂರಿನಲ್ಲಿ ಭೂಕುಸಿತದಲ್ಲಿ ಮೃತಪಟ್ಟ ಅರ್ಜುನ್ ಸಹೋದರಿ ಅಂಜು ಅವರು ನೀಡಿದ ದೂರಿನ ಅನ್ವಯ ಲಾರಿ ಮಾಲಕ ಮನಾಫ್ ಮತ್ತು ಇತರರ ವಿರುದ್ಧ ಪ್ರಕರಣವನ್ನು ದಾಖಲಾಗಿದೆ.
ಮನಾಫ್ ತನ್ನ ಮೃತ ಸಹೋದರನ ಫೋಟೋ ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದು, ಯೂಟ್ಯೂಬ್ ಚಾನೆಲ್ ಆರಂಭಿಸಿ ಅಪಪ್ರಚಾರ ಮಾಡಿ ಕುಟುಂಬಕ್ಕೆ ಮಾನಹಾನಿ ಮಾಡಿದ್ದಾರೆ ಎಂದು ಅಂಜು ದೂರಿನಲ್ಲಿ ಆರೋಪಿಸಿದ್ದಾರೆ.
ಚೇವಾಯೂರು ಪೊಲೀಸರು ಅಂಜು ನೀಡಿದ ದೂರಿನ ಆಧಾರದಲ್ಲಿ ಮನಾಫ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಮನಾಫ್ ನಮ್ಮ ಕುಟುಂಬದ ವಿರುದ್ಧ ಕೋಮು ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಸೈಬರ್ ದಾಳಿ ನಡೆಸುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಮನಾಫ್ ನಮ್ಮ ಸ್ಥಿತಿಯನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದಾರೆ. ನಮ್ಮನ್ನು ನಿರ್ಗತಿಕರು ಎಂದು ನಿರೂಪಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಇದು ಕುಟುಂಬದ ಅನೇಕ ಸದಸ್ಯರಿಗೆ ನೋವುಂಟುಮಾಡಿದೆ ಎಂದು ಅರ್ಜುನ್ ಸಹೋದರಿ ಅಂಜು ಆರೋಪಿಸಿದ್ದಾರೆ.
ಮನಾಫ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್-192(ಗಲಭೆಗೆ ಪ್ರಚೋದನೆ) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (O) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಮನಾಫ್, ಈ ಬಗ್ಗೆ ನಾನು ವಿವಾದ ಸೃಷ್ಟಿಸಲು ಬಯಸುವುದಿಲ್ಲ. ನಾನು ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಂಡಿದ್ದೆ, ನನ್ನಿಂದ ತಪ್ಪಾಗಿದ್ದರೆ ನಾನು ಅರ್ಜುನ್ ಕುಟುಂಬದ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.