ಮಂಗಳೂರು ಸೇರಿ ಅದಾನಿ ಸಮೂಹ ನಿರ್ವಹಿಸುತ್ತಿರುವ ಎಲ್ಲಾ 7 ವಿಮಾನ ನಿಲ್ದಾಣಗಳಿಗೆ ನಷ್ಟ
ಹೊಸದಿಲ್ಲಿ: ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಅದಾನಿ ಸಮೂಹ ನಿರ್ವಹಿಸುತ್ತಿರುವ ದೇಶದ ಎಲ್ಲ 7 ವಿಮಾನ ನಿಲ್ದಾಣಗಳು 2023 ವಿತ್ತ ವರ್ಷದಲ್ಲಿ ನಷ್ಟ ಎದುರಿಸುತ್ತಿವೆ ಎಂದು ಕೇಂದ್ರ ಸರಕಾರ ಹೇಳಿದೆ. ಲೋಕಸಭೆಯಲ್ಲಿ ಸೇಲಂ ಸಂಸದ ಎಸ್.ಆರ್ ಪಾರ್ಥಿಬನ್ ಅವರು ಕೇಳಿದ ಪ್ರಶ್ನೆಗೆ ನಾಗರಿಕ ವಾಯು ಯಾನ ಸಚಿವಾಲಯ ನೀಡಿದ ದತ್ತಾಂಶದ ವಿಶ್ಲೇಷಣೆಯಿಂದ ಇದು ಬಹಿರಂಗಗೊಂಡಿದೆ ಎಂದು thehindubusinessline.com ವರದಿ ಮಾಡಿದೆ.
ಅತ್ಯಧಿಕ ನಷ್ಟ ಎದುರಿಸಿದ ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ವಿಮಾನ ನಿಲ್ದಾಣ ಅಹ್ಮದಾಬಾದ್ ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣಕ್ಕೆ 2023 ವಿತ್ತ ವರ್ಷದಲ್ಲಿ 408.51 ಕೋ.ರೂ. ನಷ್ಟ ಉಂಟಾಗಿದೆ. ಭಾರತದಲ್ಲಿ 14 ವಿಮಾನ ನಿಲ್ದಾಣಗಳು ಪಿಪಿಪಿ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 7 ಪೂರ್ಣವಾಗಿ ಅಥವಾ ಭಾಗಶಃವಾಗಿ ಅದಾನಿ ಸಮೂಹ ನಿರ್ವಹಿಸುತ್ತಿದೆ. ಈ ವಿಮಾನ ನಿಲ್ದಾಣಗಳಲ್ಲಿ ಅಹ್ಮದಾಬಾದ್ ಸೇರಿದಂತೆ ಮುಂಬೈ, ಜೈಪುರ, ತಿರುವನಂತಪುರ, ಗುವಾಹಟಿ, ಲಕ್ನೋ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳು ಸೇರಿವೆ. ಈ ಎಲ್ಲಾ ವಿಮಾನ ನಿಲ್ದಾಣಗಳು 2023ರ ವಿತ್ತ ವರ್ಷದಲ್ಲಿ ನಷ್ಟ ಅನುಭವಿಸಿವೆ.
ಅದಾನಿ ಮಾಲಕತ್ವದ ವಿಮಾನ ನಿಲ್ದಾಣಗಳು ನಷ್ಟದಲ್ಲಿ ನಡೆಯುತ್ತಿವೆಯಾದರೂ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್ (ಎಎಎಚ್ಎಲ್) ಲಾಭದಲ್ಲಿ ನಡೆಯುತ್ತಿವೆ. ಈ ಸಂಸ್ಥೆ 2023 ವಿತ್ತ ವರ್ಷದಲ್ಲಿ ಲಾಭ ದಾಖಲಿಸಿದೆ. ಈ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಎಎಎಚ್ಎಲ್ ಇತರ ಸಹ ಸಂಸ್ಥೆಗಳನ್ನು ಕೂಡ ಹೊಂದಿವೆ. ಅಲ್ಲದೆ, ಈ ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ಒದಗಿಸುತ್ತದೆ ಎಂಬುದನ್ನು ಈ ಅಂಕಿ-ಅಂಶಗಳು ಬಹಿರಂಗಪಡಿಸಿವೆ.